ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಹೊರವಲಯದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ 10 ಮಂದಿ ಗಣಿಯೊಳಗೆ ಸಿಲುಕಿಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳು ತುರ್ತು ಕಾರ್ಯಾಚರಣೆಯನ್ನು ಮುಂದುವರಿಸಿವೆ.
ಅಧಿಕಾರಿಗಳ ಪ್ರಕಾರ, ಭೂಗತ ಗಣಿಯಲ್ಲಿ ಮೀಥೇನ್ ಅನಿಲ ಸಂಗ್ರಹಗೊಂಡಿದ್ದರಿಂದ ಸ್ಫೋಟ ಸಂಭವಿಸಿದೆ. ಆರಂಭದಲ್ಲಿ ಏಳು ಮೃತದೇಹಗಳನ್ನು ಹೊರತೆಗೆದ ರಕ್ಷಣಾ ಸಿಬ್ಬಂದಿ, ಬಳಿಕ ಮತ್ತಷ್ಟು 25 ಶವಗಳನ್ನು ಪತ್ತೆಹಚ್ಚಿದ್ದು, ಒಟ್ಟು ಸಾವಿನ ಸಂಖ್ಯೆ 32ಕ್ಕೆ ಏರಿದೆ. ಉಳಿದ ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೆ ಮೀಥೇನ್ ಸ್ಫೋಟದಿಂದ ಗಣಿಯೊಳಗಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿರುವುದರಿಂದ ಕಾರ್ಯಾಚರಣೆ ಸವಾಲಿನದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣಿಯಿಂದ ಹೊರತೆಗೆದ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಸ್ಥಳದಲ್ಲಿ ಇನ್ನೂ ಸಿಲುಕಿರುವ ಕಾರ್ಮಿಕರ ಕುಟುಂಬಸ್ಥರು ಆತಂಕದಿಂದ ರಕ್ಷಣಾ ಕಾರ್ಯಾಚರಣೆಯತ್ತ ಕಣ್ಣಿಟ್ಟಿದ್ದಾರೆ. ಬಲೂಚಿಸ್ತಾನದ ಗಣಿ ಮತ್ತು ಖನಿಜ ಸಚಿವ ಶೋಯೆಬ್ ನೊಶೆರ್ವಾನಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಪ್ರತಿಯೊಬ್ಬ ಮೃತ ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ಪಾಕಿಸ್ತಾನಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಘಟನೆಯ ಕುರಿತು ಸಮಗ್ರ ತನಿಖೆಗೆ ಸರ್ಕಾರ ಆದೇಶ ನೀಡಿದ್ದು, ಸ್ಫೋಟದ ನಿಖರ ಕಾರಣ ಪತ್ತೆಹಚ್ಚುವ ಜೊತೆಗೆ ಗಣಿಗಳಲ್ಲಿನ ಸುರಕ್ಷತಾ ಕ್ರಮಗಳನ್ನು ಮರುಪರಿಶೀಲಿಸುವುದಾಗಿ ತಿಳಿಸಿದೆ. ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸುರಕ್ಷತಾ ಪ್ರೋಟೋಕಾಲ್ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತ ಪಾಕಿಸ್ತಾನ ಕೇಂದ್ರ ಗಣಿ ಕಾರ್ಮಿಕರ ಒಕ್ಕೂಟ ಈ ದುರಂತಕ್ಕೆ ಗಣಿ ನಿರ್ವಹಣೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಆರೋಪಿಸಿದೆ. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಮಿಕರಿಗೆ ಅಗತ್ಯ ರಕ್ಷಣಾ ಸಾಧನಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಬಲೂಚಿಸ್ತಾನದಲ್ಲಿ ಗಣಿಗಾರಿಕೆ ಅಪಘಾತಗಳು ಆಗಾಗ ಸಂಭವಿಸುತ್ತಿದ್ದು, ಅನೇಕ ಗಣಿಗಳಲ್ಲಿ ಮೀಥೇನ್ ಅನಿಲ ಮೇಲ್ವಿಚಾರಣಾ ವ್ಯವಸ್ಥೆ, ತುರ್ತು ಸುರಕ್ಷತಾ ಸಾಧನಗಳು ಹಾಗೂ ಸಮರ್ಪಕ ಮೂಲಸೌಕರ್ಯಗಳ ಕೊರತೆ ಇರುವುದಾಗಿ ಹಲವು ಬಾರಿ ಟೀಕೆ ವ್ಯಕ್ತವಾಗಿದೆ. ಆದರೂ ಸೀಮಿತ ಉದ್ಯೋಗಾವಕಾಶಗಳು ಮತ್ತು ಬಡತನದ ಕಾರಣ ಸಾವಿರಾರು ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಅಪಾಯಕಾರಿ ಕಲ್ಲಿದ್ದಲು ಗಣಿಗಾರಿಕೆಯನ್ನು ಅವಲಂಬಿಸಿವೆ.

