ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಟುಡೇಸ್ ಚಾಣಕ್ಯ ಸಮೀಕ್ಷೆ ಭವಿಷ್ಯ ನುಡಿದಿದೆ.
ಸಮೀಕ್ಷೆಯ ಪ್ರಕಾರ, ಬಿಜೆಪಿ 192 ± 11 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 100 ± 11 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇತರ ಪಕ್ಷಗಳು ಕೇವಲ 2 ± 2 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ.
ಮತ ಹಂಚಿಕೆಯಲ್ಲಿ ಬಿಜೆಪಿ 48% ± 3% ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಟಿಎಂಸಿ 38% ± 3% ಮತ ಹಂಚಿಕೆ ಪಡೆದರೆ, ಇತರ ಪಕ್ಷಗಳು 14% ± 3% ಮತಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
2021ರ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತ್ತು. ಬಿಜೆಪಿ 77 ಸ್ಥಾನಗಳನ್ನು ಪಡೆದು ವಿರೋಧ ಪಕ್ಷ ಸ್ಥಾನ ಪಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಯಾವುದೇ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದ್ದವು.
ಈ ಬಾರಿ ಸಮೀಕ್ಷೆ ಭಿನ್ನ ಚಿತ್ರಣ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

