ಬೆಂಗಳೂರು: 'ಅವನು ಮತ್ತು ಶ್ರಾವಣಿ' ಧಾರಾವಾಹಿ ಮೂಲಕ ಮನೆಮಾತಾಗಿದ್ದ ನಟಿ ಚೈತ್ರಾ ರೆಡ್ಡಿ ಅವರ ವೈವಾಹಿಕ ಜೀವನದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಪತಿ, ನಿರ್ಮಾಪಕ ಹಾಗೂ ಛಾಯಾಗ್ರಾಹಕ ರಾಕೇಶ್ ಸಮುಲ ಅವರೊಂದಿಗಿನ ವಿಚ್ಛೇದನದ ವದಂತಿಗಳ ನಡುವೆ, ಚೈತ್ರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಪತಿಯೊಂದಿಗಿನ ಎಲ್ಲಾ ಫೋಟೋಗಳನ್ನು ಅಳಿಸಿಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೆಲ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಚೈತ್ರಾ ಮತ್ತು ರಾಕೇಶ್ ದಂಪತಿ ಈಗ ಬೇರ್ಪಡುವ ಹಂತದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇಬ್ಬರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಸಾಮಾಜಿಕ ಜಾಲತಾಣದಲ್ಲಿನ ಈ ಬದಲಾವಣೆ ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ.
ಆಂಧ್ರ ಮೂಲದವರಾದ ಚೈತ್ರಾ ರೆಡ್ಡಿ ಬೆಂಗಳೂರಿನಲ್ಲಿ ಬೆಳೆದಿದ್ದು, ಕನ್ನಡದ 'ಅವನು ಮತ್ತು ಶ್ರಾವಣಿ' ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದ್ದರು. ಬಳಿಕ 2019ರಲ್ಲಿ ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸಿನಿಮಾ ಬಳಿಕ ಅವರು ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
2020ರ ನವೆಂಬರ್ 11ರಂದು ಕುಟುಂಬದವರ ಸಮ್ಮುಖದಲ್ಲಿ ರಾಕೇಶ್ ಸಮುಲ ಅವರನ್ನು ಚೈತ್ರಾ ವಿವಾಹವಾಗಿದ್ದರು. ಮದುವೆಗೆ ಮುನ್ನ "ಅಂತೂ ಪ್ರೀತಿ ಮತ್ತು ತಾಳ್ಮೆ ಗೆದ್ದಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದ ಅವರು, ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿಯನ್ನೂ ಆಚರಿಸಿದ್ದರು.
ಈಗ ಪತಿಯೊಂದಿಗಿನ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಿರುವುದು ವಿಚ್ಛೇದನದ ಸುದ್ದಿಗೆ ಕಾರಣವಾಗಿದ್ದು, ಈ ಕುರಿತು ಅಧಿಕೃತ ಸ್ಪಷ್ಟನೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

