Dailyhunt Logo
  • Light mode
    Follow system
    Dark mode
    • Play Story
    • App Story
'ಪೆದ್ದಿ' ರಿಲೀಸ್‌ಗೇ ಬಿಗ್ ಶಾಕ್? ಪವನ್ ಕಲ್ಯಾಣ್ ಮನೆಬಾಗಿಲಿಗೆ ಓಡಿದ ಟಾಲಿವುಡ್ ನಿರ್ಮಾಪಕರು!

'ಪೆದ್ದಿ' ರಿಲೀಸ್‌ಗೇ ಬಿಗ್ ಶಾಕ್? ಪವನ್ ಕಲ್ಯಾಣ್ ಮನೆಬಾಗಿಲಿಗೆ ಓಡಿದ ಟಾಲಿವುಡ್ ನಿರ್ಮಾಪಕರು!

AIN Kannada 1 week ago

ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕರು ಮತ್ತು ಸಿನಿಮಾ ಪ್ರದರ್ಶಕರ ನಡುವಿನ ಸಂಘರ್ಷ ಇದೀಗ ಹೊಸ ಹಂತಕ್ಕೆ ತಲುಪಿದ್ದು, ಬಹುನಿರೀಕ್ಷಿತ 'ಪೆದ್ದಿ' ಸಿನಿಮಾದ ಬಿಡುಗಡೆ ಸುತ್ತ ಭಾರೀ ಗೊಂದಲ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಸಂಧಾನ ಸಭೆಯ ಬಳಿಕವೂ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ, ಕೆಲ ಪ್ರದರ್ಶಕರು 'ಪೆದ್ದಿ' ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವುದು ಟಾಲಿವುಡ್ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ಈ ಗಂಭೀರ ಬೆಳವಣಿಗೆಯ ನಡುವೆಯೇ ಕೆಲ ಪ್ರಮುಖ ನಿರ್ಮಾಪಕರು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರನ್ನು ರಾಜಮಂಡ್ರಿಯಲ್ಲಿ ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ನಿರ್ಮಾಪಕರಾದ ನಾಗ ವಂಶಿ, ರವಿಶಂಕರ್, ಸಾಹು ಗಾರಪಾಟಿ ಸೇರಿದಂತೆ ಹಲವು ಮಂದಿ ಈ ಭೇಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ, ಪ್ರಮುಖ ನಿರ್ಮಾಪಕ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರಾಗಿರುವ ಏಷಿಯನ್ ಸುನಿಲ್ ವಿರುದ್ಧವೂ ಕೆಲ ಅಸಮಾಧಾನಗಳನ್ನು ಪವನ್ ಕಲ್ಯಾಣ್ ಮುಂದೆ ನಿರ್ಮಾಪಕರು ವ್ಯಕ್ತಪಡಿಸಿದ್ದಾರೆ. ಸಿನಿಮಾ ಪ್ರದರ್ಶನ ವ್ಯವಸ್ಥೆಯಲ್ಲಿ ಏಕಪಕ್ಷೀಯ ನಿರ್ಧಾರಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.

ಪ್ರಸ್ತುತ ತೆಲುಗು ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಡಿಗೆ ಮಾದರಿಯಲ್ಲಿ ಸಿನಿಮಾಗಳನ್ನು ಪ್ರದರ್ಶಿಸುತ್ತಿವೆ. ಆದರೆ ಈಗ ಪ್ರದರ್ಶಕರು ಲಾಭ ಹಂಚಿಕೆ (ಪರ್ಸೆಂಟೇಜ್) ಮಾದರಿಯನ್ನು ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ನಿರ್ಮಾಪಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಶೇಷವಾಗಿ 'ಪೆದ್ದಿ' ಸಿನಿಮಾವನ್ನು ಹಳೆಯ ಬಾಡಿಗೆ ಮಾದರಿಯಲ್ಲೇ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನಿರ್ಮಾಪಕರ ಮನವಿಯನ್ನು ಆಲಿಸಿದ ಪವನ್ ಕಲ್ಯಾಣ್, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಜೊತೆಯಲ್ಲಿದ್ದ ಆಂಧ್ರದ ಸಿನೆಮಾಟೋಗ್ರಫಿ ಸಚಿವ ಕಂದುಲ ದುರ್ಗೇಶ್ ಅವರಿಗೆ ತಕ್ಷಣ ಮಧ್ಯಪ್ರವೇಶಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪರಿಸ್ಥಿತಿಯ ಬೆಳವಣಿಗೆಗಳ ಬಗ್ಗೆ ನಿರಂತರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೀಗ 'ಪೆದ್ದಿ' ಸಿನಿಮಾ ಬಿಡುಗಡೆ ಸುತ್ತ ನಿರ್ಮಾಣವಾಗಿರುವ ಈ ಹೈಡ್ರಾಮಾ, ತೆಲುಗು ಚಿತ್ರರಂಗದ ಭವಿಷ್ಯದ ವಿತರಣಾ ವ್ಯವಸ್ಥೆಯನ್ನೇ ಬದಲಿಸುವ ಹಂತಕ್ಕೆ ತಲುಪಿದೆ ಎಂಬ ಚರ್ಚೆ ಶುರುವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News