ಬೆಂಗಳೂರು: ಪೊಲೀಸರ ಸೂಚನೆ ಮೇರೆಗೆ ಯುವಕರು ತಂದೆ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಹಾಗೂ ಅವರ ಮಗ ವಿಶ್ವನಾಥ್ ಮೇಲೆ ಲಾಂಗ್ ಮತ್ತು ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯುವಕರ ಗುಂಪು ಮನೆಯ ಬಳಿ ದಾಳಿ ನಡೆಸಿ ಹಲ್ಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ.
ಕೊಲೆ ಪ್ರಕರಣವೊಂದರ ತನಿಖೆ ಸಂಬಂಧ ವಿಶ್ವನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲವೆಂದು ತಿಳಿದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಬಿಡುಗಡೆ ಮಾಡುವ ವೇಳೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ನಂತರ ವಿಶ್ವನಾಥ್ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಪುತ್ರ ಎಂಬುದು ತಿಳಿದ ಬಳಿಕ ಪೊಲೀಸರು ಅವರನ್ನು ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದೆ. ಇದರ ಕೆಲ ದಿನಗಳ ಬಳಿಕ ವಿಶ್ವನಾಥ್ ಮನೆ ಬಳಿ ಬಂದಿದ್ದ ಯುವಕರು "ಪೊಲೀಸರಿಂದ ಡೀಲ್ ಬಂದಿದೆ" ಎಂದು ಹೇಳಿ ತಂದೆ-ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಗೋವಿಂದರಾಜನಗರ ಪೊಲೀಸ್ ಠಾಣೆಯ ಪ್ರಸನ್ನ ಹಾಗೂ ನೇತಾಜಿ ಎಂಬ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಡೀಲ್ ಆರೋಪ ಕೇಳಿಬಂದಿದೆ.
ಹಲ್ಲೆ ನಡೆಸಿ ಪರಾರಿಯಾಗಿರುವ ಪ್ರಜ್ವಲ್ ಹಾಗೂ ಮತ್ತೊಬ್ಬ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ಕುರಿತು ಗೋವಿಂದರಾಜನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

