ಬೆಂಗಳೂರು/ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಆರೋಪ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು, "ಶಾಸಕರಿಗೆ ಅಪಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಬಹುದಿತ್ತು.
ಆದರೆ 800 ಜನರಿದ್ದ ಸ್ಥಳದಲ್ಲಿ ಕೇವಲ ಈ ನಾಲ್ವರ ವಿರುದ್ಧವೇ ಪ್ರಕರಣ ದಾಖಲಿಸಿರುವುದೇಕೆ?" ಎಂದು ಚಿಕ್ಕಬಳ್ಳಾಪುರ ಪೊಲೀಸರನ್ನು ಪ್ರಶ್ನಿಸಿದೆ.
ಈ ಸಂಬಂಧ ಪೊಲೀಸರಿಂದ ಪ್ರತಿಕ್ರಿಯೆ ಕೇಳಿರುವ ನ್ಯಾಯಾಲಯ, ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್. ಮಹೇಂದ್ರ ಮತ್ತು ಟಿ.ಎಸ್. ಪ್ರಕಾಶ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಗಲಾಟೆ
ಚಿಕ್ಕಬಳ್ಳಾಪುರದಲ್ಲಿ ಜೂನ್ 27ರಂದು ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ಶಾಸಕ ಪ್ರದೀಪ್ ಈಶ್ವರ್ ನೀಡಿದ್ದ ಹೇಳಿಕೆಗೆ ಆಕ್ರೋಶಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು, ನಗರದ ಕನ್ನಡ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಘೋಷಣೆ ಕೂಗಿ ಗಲಾಟೆ ನಡೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ವಾಮೀಜಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಕಾರ್ಯಕ್ರಮದ ಬಳಿಕ ಮತ್ತೆ ಗಲಾಟೆ
ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಗಲಾಟೆ ಆರಂಭವಾಗಿತ್ತು. ಶಾಸಕ ಪ್ರದೀಪ್ ಈಶ್ವರ್ ಅವರು ಕಾರಿನ ಸನ್‌ರೂಫ್ ತೆರೆದು ನಿಂತು ಮೆರವಣಿಗೆ ತೆರಳುತ್ತಿದ್ದ ವೇಳೆ, ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರಿಗೆ ಪ್ರತಿಕ್ರಿಯೆಯಾಗಿ ಮೀಸೆ ತಿರುವಿ, ತೋಳು ತಟ್ಟಿ ಸವಾಲು ಹಾಕಿದ್ದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡಿದ್ದ ಕೆಲ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕರ ಮೇಲೆ ಚಪ್ಪಲಿ ಎಸೆದಿದ್ದರು ಎಂದು ಆರೋಪಿಸಲಾಗಿದೆ.
ಘಟನೆ ನಡೆದ ತಕ್ಷಣ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದರು.
ನಾಲ್ವರ ಬಂಧನ
ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿಎಸ್‌ಐ ಅಮರ್ ಅವರು ಸ್ವಯಂಪ್ರೇರಿತವಾಗಿ (Suo Moto) ಎಫ್‌ಐಆರ್ ದಾಖಲಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಶಾಸಕರ ಮೇಲೆ ಚಪ್ಪಲಿ ಎಸೆದ ಆರೋಪ, ಅವಾಚ್ಯ ಪದಗಳಿಂದ ನಿಂದನೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್. ಮಹೇಂದ್ರ ಮತ್ತು ಟಿ.ಎಸ್. ಪ್ರಕಾಶ್ ಅವರನ್ನು ಬಂಧಿಸಿದ್ದರು.
ಇದೀಗ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಿದ್ದು, ಮುಂದಿನ ವಿಚಾರಣೆಯಲ್ಲಿ ಪ್ರಕರಣದ ಮುಂದಿನ ಬೆಳವಣಿಗೆ ಸ್ಪಷ್ಟವಾಗಲಿದೆ.

