ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಿದ್ದರಾಮಯ್ಯನವರ ಸಚಿವಸಂಪುಟದ ಮೊದಲನೇ ವಿಕೆಟ್ ಇವತ್ತು ಪತನವಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಪ್ರಶ್ನೆಗೆ ಉತ್ತರ ನೀಡಿದರು.
ರಾಮಲಿಂಗಾರೆಡ್ಡಿಯವರು ಹಿರಿಯರಿದ್ದಾರೆ. ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ; ಕಾಂಗ್ರೆಸ್ಸಿನವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ ಎಂಬುದು ವಾಸ್ತವಿಕ ಸತ್ಯ ಎಂದು ನುಡಿದರು. ನಾಡಿನ ರೈತರ ಸಮಸ್ಯೆ ಪರಿಹಾರದ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು.
ಹಗ್ಗಜಗ್ಗಾಟದಲ್ಲೇ 3 ವರ್ಷ ಕಳೆದಿದ್ದಾರೆ. ಯಾವುದೇ ಒಬ್ಬ ಸಚಿವರು ನಾಮಕಾವಾಸ್ತೆ ಉಸ್ತುವಾರಿ ಸಚಿವರಾಗಿದ್ದರು. ರಾಜ್ಯದ ಸಚಿವರು ತಮ್ಮ ಜಿಲ್ಲೆಗೆ ಸೀಮಿತವಾಗಿದ್ದರೇ ಹೊರತು ಯಾವುದೇ ಇತರ ಜಿಲ್ಲೆಗೆ ಪ್ರವಾಸ ಮಾಡಿಲ್ಲ. ಈಗ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇರುವುದು ಕೇವಲ 2 ವರ್ಷ ಮಾತ್ರ. ಈಗ ಮತ್ತೆ ಹಗ್ಗಜಗ್ಗಾಟ, ಯಾವ ಖಾತೆ, ಯಾವ ಜಿಲ್ಲೆ ಉಸ್ತುವಾರಿ ಪಡೆದುಕೊಳ್ಳಬೇಕೆಂಬ ಕಿತ್ತಾಟದಲ್ಲಿ ಇವತ್ತು ರಾಮಲಿಂಗಾರೆಡ್ಡಿಯವರು ರಾಜೀನಾಮೆ ನೀಡಿದ್ದಾರೆ ಎಂದು ನುಡಿದರು.
ಬಿಜೆಪಿ ಸರಕಾರ ಬರಬೇಕೆಂಬ ನಿರೀಕ್ಷೆ, ಅಪೇಕ್ಷೆ ಜನರಲ್ಲಿದೆ..
ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸರಕಾರದಿಂದ ಅಭಿವೃದ್ಧಿ ನೋಡಲು ಸಾಧ್ಯವಿಲ್ಲ. ಜನರ ಭರವಸೆಗಳನ್ನು ಇವರು ಕಡೆಗಣಿಸಲಿದ್ದಾರೆ. ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕು; ಮುಂದೆ ಬಿಜೆಪಿ ಸರಕಾರ ಬರಬೇಕೆಂಬ ನಿರೀಕ್ಷೆ, ಅಪೇಕ್ಷೆ ಜನರಲ್ಲಿದೆ ಎಂದು ತಿಳಿಸಿದರು. ಪರಸ್ಪರ ಕಾಲೆಳೆಯುತ್ತ ಸಮಯ ಕಳೆಯಲಿದ್ದು, ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಯಿಲ್ಲ ಎಂದು ತಿಳಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಲು ನೂರಾರು ಕಾರಣಗಳಿವೆ. ಈಗ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ಹೇಳಿದರು. ವಿಧಾನಪರಿಷತ್‍ನ 2 ಸ್ಥಾನ, ರಾಜ್ಯಸಭೆಯ ಒಂದು ಸ್ಥಾನದ ಸ್ಪರ್ಧಿಗಳ ಕುರಿತು ಕೇಂದ್ರದ ವರಿಷ್ಠರು ಇವತ್ತು ಅಥವಾ ನಾಳೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

