ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ, ಪತ್ನಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಇದೀಗ ವೈರಲ್ ಆಗಿದೆ. ಚಿತ್ರದಲ್ಲಿ ಯಶ್ ರಾವಣನಾಗಿ ಅಬ್ಬರಿಸುತ್ತಿರುವ ಹೊತ್ತಲ್ಲೇ, ರಾಧಿಕಾ ರಾವಣನ ಬೃಹತ್ ಪ್ರತಿಮೆಯ ಮುಂದೆ ನಿಂತಿರುವ ಫೋಟೋ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸಮುದ್ರ ತೀರದ ಹಿನ್ನೆಲೆಯಲ್ಲಿರುವ ಬೃಹತ್ ದಶಕಂಠ ರಾವಣನ ಮೂರ್ತಿಯ ಮುಂದೆ ನಿಂತಿರುವ ರಾಧಿಕಾ, "ಗೊತ್ತಿರೋರಿಗೆ ಮಾತ್ರ ಗೊತ್ತು" ಎಂಬ ಕ್ಯಾಪ್ಶನ್ ನೀಡಿ ಪೋಸ್ಟ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆಯಾದ ಸಮಯದಲ್ಲೇ ಈ ಫೋಟೋ ಹಂಚಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಪೋಸ್ಟ್‌ಗೆ ಅಭಿಮಾನಿಗಳು ಬಗೆಬಗೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ನಮ್ಮ ರಾವಣನ ನಿಜವಾದ ಮಂಡೋದರಿ ಇವರೇ", "ರಾವಣನಿಗೆ ಸಿಕ್ಕ ದೊಡ್ಡ ಸಪೋರ್ಟ್ ಇದೇ", "ರಾಮಾಯಣ ಹೈಪ್‌ಗೆ ರಾಧಿಕಾ ಹೊಸ ಟಚ್ ಕೊಟ್ಟಿದ್ದಾರೆ" ಎಂದು ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ಫೋಟೋದಲ್ಲಿ ಬಿಳಿ ಬಣ್ಣದ ಪ್ರಿಂಟೆಡ್ ಲಾಂಗ್ ಡ್ರೆಸ್, ಕಪ್ಪು ಸನ್‌ಗ್ಲಾಸ್ ಧರಿಸಿರುವ ರಾಧಿಕಾ ಪಂಡಿತ್ ಕ್ಲಾಸಿ ಲುಕ್‌ನಲ್ಲಿ ಮಿಂಚಿದ್ದಾರೆ. ಪತಿ ಯಶ್ ಅವರ ಸಿನಿಮಾಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ರಾಧಿಕಾ, ಈ ಪೋಸ್ಟ್ ಮೂಲಕ ಮತ್ತೊಮ್ಮೆ 'ರಾಮಾಯಣ' ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದ್ದಾರೆ.

