Dailyhunt Logo
  • Light mode
    Follow system
    Dark mode
    • Play Story
    • App Story
ರಾಯಚೂರಿನಲ್ಲಿ ಕೆಪಿಎಸ್ ಶಾಲೆ ವಿಲೀನಕ್ಕೆ ಭಾರೀ ವಿರೋಧ

ರಾಯಚೂರಿನಲ್ಲಿ ಕೆಪಿಎಸ್ ಶಾಲೆ ವಿಲೀನಕ್ಕೆ ಭಾರೀ ವಿರೋಧ

AIN Kannada 1 hr ago

ರಾಯಚೂರು: ರಾಜ್ಯ ಸರ್ಕಾರದ ಸರ್ಕಾರಿ ಶಾಲೆಗಳ ವಿಲೀನ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಹಲವು ಸಂಘಟನೆಗಳು ಈ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿವೆ.

ಶಿಕ್ಷಣ ಇಲಾಖೆಯ ಯೋಜನೆಯ ಪ್ರಕಾರ, ಆಯ್ದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಅವುಗಳ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆಗಳ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ. ಆದರೆ ಈ ನೀತಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ನೀಡಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಾಲೆ ಉಳಿಸಿ ಸಮಿತಿ ನೇತೃತ್ವದಲ್ಲಿ ರಾಯಚೂರು ಹೊಸ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದವರು, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಯೋಜನೆಯ ಪರಿಣಾಮವಾಗಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುವ ಅಪಾಯ ಎದುರಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

ಜಿಲ್ಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ಈಗಾಗಲೇ ಗಂಭೀರ ಸಮಸ್ಯೆಗಳಿವೆ. ಒಟ್ಟು 5,624 ಶಿಕ್ಷಕರ ಹುದ್ದೆಗಳಲ್ಲಿ ಸುಮಾರು 50% ಖಾಲಿ ಇದ್ದು, 266 ಶಾಲೆಗಳು ಒಬ್ಬ ಶಿಕ್ಷಕರಿಂದಲೇ ನಡೆಯುತ್ತಿವೆ. ಅನೇಕ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ಇದೆ. ಜೊತೆಗೆ 874 ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಸೌಕರ್ಯ ಸಮಸ್ಯೆಗಳು ತೀವ್ರವಾಗಿವೆ.

ಇಂತಹ ಸ್ಥಿತಿಯಲ್ಲಿ ಶಾಲೆಗಳ ವಿಲೀನ ಸರಿಯಾದ ಪರಿಹಾರವಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ. ಬದಲಾಗಿ ಶಿಕ್ಷಕರ ನೇಮಕಾತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News