Dailyhunt Logo
  • Light mode
    Follow system
    Dark mode
    • Play Story
    • App Story
ರಾಯಚೂರಿನಲ್ಲಿ ಸರ್ಕಾರಿ ಶಾಲೆ ವಿಲೀನಕ್ಕೆ ಭಾರಿ ವಿರೋಧ: ಬೃಹತ್ ಪ್ರತಿಭಟನೆ

ರಾಯಚೂರಿನಲ್ಲಿ ಸರ್ಕಾರಿ ಶಾಲೆ ವಿಲೀನಕ್ಕೆ ಭಾರಿ ವಿರೋಧ: ಬೃಹತ್ ಪ್ರತಿಭಟನೆ

AIN Kannada 9 hrs ago

ರಾಯಚೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆ (KPS School Mergers) ಹಾಗೂ ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಯೋಜನೆಯ ವಿರುದ್ಧ ವಿವಿಧ ಸಂಘಟನೆಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದು, ಸರ್ಕಾರದ ನಿರ್ಧಾರವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿವೆ.

ಹೊಸ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಾಲೆ ಉಳಿಸಿ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೋರಾಟಗಾರರು ಸರ್ಕಾರಿ ಶಾಲೆಗಳ ವಿಲೀನವು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಹೊಡೆತವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಶಿಕ್ಷಣ ಇಲಾಖೆ ತಕ್ಷಣ ನೀತಿ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಮೂಲಗಳ ಪ್ರಕಾರ, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಆಯ್ದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಅವುಗಳ ಬದಲಿಗೆ ಕೆಪಿಎಸ್ ಮಾದರಿ ಶಾಲೆಗಳನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ. ಆದರೆ ಈ ಕ್ರಮದಿಂದ ರಾಯಚೂರು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ ಎಂದು ಹೋರಾಟಗಾರರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಶಿಕ್ಷಕರ ಕೊರತೆ ತೀವ್ರವಾಗಿದ್ದು, ಒಟ್ಟು 5,624 ಮಂಜೂರಾದ ಹುದ್ದೆಗಳಲ್ಲಿ ಶೇಕಡ 50ರಷ್ಟು ಹುದ್ದೆಗಳು ಖಾಲಿಯಲ್ಲಿವೆ ಎಂದು ಆರೋಪಿಸಲಾಗಿದೆ. 266 ಶಾಲೆಗಳು ಕೇವಲ ಒಬ್ಬ ಶಿಕ್ಷಕರಿಂದಲೇ ನಡೆಯುತ್ತಿರುವ ಸ್ಥಿತಿ ಇದೆ. ಜೊತೆಗೆ 874 ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕೂಡ ಗಂಭೀರವಾಗಿದೆ.

ಇಂತಹ ಸ್ಥಿತಿಯಲ್ಲಿ ಶಾಲೆಗಳನ್ನು ಬಲಪಡಿಸುವ ಬದಲು ವಿಲೀನದ ಹೆಸರಿನಲ್ಲಿ ಮುಚ್ಚಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ದೂರದ ಕೆಪಿಎಸ್ ಶಾಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಇದರಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ.

ಸರ್ಕಾರ ತಕ್ಷಣ ಶಿಕ್ಷಕರ ನೇಮಕಾತಿ ಮಾಡಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News