ಮುಂಬೈ: ಭಾರತೀಯ ಕಿರುತೆರೆಯ ಐಕಾನಿಕ್ ಸೂಪರ್‌ಹೀರೋ 'ಶಕ್ತಿಮಾನ್' ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧತೆ ನಡೆದಿದ್ದರೂ, ಚಿತ್ರದ ನಾಯಕನ ಆಯ್ಕೆ ವಿಚಾರದಲ್ಲಿನ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ. ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಶಕ್ತಿಮಾನ್ ಪಾತ್ರಕ್ಕೆ ಆಯ್ಕೆ ಮಾಡುವ ಪ್ರಸ್ತಾಪವನ್ನು ಮೂಲ ಶಕ್ತಿಮಾನ್ ಮುಕೇಶ್ ಖನ್ನಾ ಸತತವಾಗಿ ವಿರೋಧಿಸಿದ್ದರು.
ಇದೀಗ ಇದೇ ನಿರ್ಧಾರದಿಂದ ತಾವು ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವುದಾಗಿ ಮುಕೇಶ್ ಖನ್ನಾ ಬಹಿರಂಗಪಡಿಸಿದ್ದಾರೆ.
ಸುಭೋಜಿತ್ ಘೋಷ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮುಕೇಶ್ ಖನ್ನಾ, ವ್ಯಾಪಾರದ ದೃಷ್ಟಿಯಿಂದ ನೋಡಿದರೆ ರಣವೀರ್ ಸಿಂಗ್ ಅವರನ್ನು ತಿರಸ್ಕರಿಸಿದ್ದು ದೊಡ್ಡ ತಪ್ಪಾಗಿರಬಹುದು ಎಂದು ಒಪ್ಪಿಕೊಂಡಿದ್ದಾರೆ. ಲಕ್ಷಗಳಲ್ಲ, ಕೋಟ್ಯಂತರ ರೂಪಾಯಿಗಳ ಚೆಕ್ ತಮ್ಮ ಕೈತಪ್ಪಿದೆ ಎಂದು ಹೇಳಿದ್ದಾರೆ.
ರಣವೀರ್ ಅತ್ಯುತ್ತಮ ನಟ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿರುವ ಮುಕೇಶ್ ಖನ್ನಾ, 'ಪದ್ಮಾವತ್'ನ ಖಿಲ್ಜಿ, 'ಗಲ್ಲಿ ಬಾಯ್' ಹಾಗೂ 'ಧುರಂಧರ್'ನಂತಹ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಬಲ್ಲರು. ಆದರೆ ಶಕ್ತಿಮಾನ್ ಪಾತ್ರಕ್ಕೆ ರಣವೀರ್ ಸೂಕ್ತರಲ್ಲ ಎಂಬುದು ತಮ್ಮ ನಿಲುವು ಎಂದಿದ್ದಾರೆ.
ಶಕ್ತಿಮಾನ್ ಪಾತ್ರಕ್ಕೆ ಸಕಾರಾತ್ಮಕ ಮುಖಭಾವ ಮತ್ತು ವಿಭಿನ್ನ ಇಮೇಜ್ ಅಗತ್ಯವಿದೆ. ರಣವೀರ್ ಅವರ ಮುಖದಲ್ಲಿ ಕಾಣುವ ತುಂಟತನ ಹಾಗೂ ತಂಟೆಕೋರತನ ಈ ಪಾತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಖನ್ನಾ ಅಭಿಪ್ರಾಯಪಟ್ಟಿದ್ದಾರೆ.
ರಣವೀರ್ ಸಿಂಗ್ ಸ್ವತಃ ಶಕ್ತಿಮಾನ್ ಪಾತ್ರ ಮಾಡಲು ಬಹಳ ಉತ್ಸುಕರಾಗಿದ್ದರು ಎನ್ನುವುದನ್ನೂ ಖನ್ನಾ ಬಹಿರಂಗಪಡಿಸಿದ್ದಾರೆ. ತಮ್ಮನ್ನು ಒಪ್ಪಿಸಲು ರಣವೀರ್ ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಅತ್ಯಂತ ಎನರ್ಜಿಟಿಕ್ ಆಗಿ ನೆಲದ ಮೇಲೆ ಕುಳಿತು ಕಥೆ ವಿವರಿಸುತ್ತಿದ್ದ ರಣವೀರ್ ಅವರ ಉತ್ಸಾಹ ನೋಡಿ ಅವರಿಗೆ ನೋ ಹೇಳಲು ಕಷ್ಟವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಆದರೆ ಅಂತಿಮವಾಗಿ ಹಣಕ್ಕಿಂತ ಮೌಲ್ಯಗಳು ಮುಖ್ಯ ಎಂಬ ನಿಲುವಿಗೆ ಬಂದಿರುವುದಾಗಿ ಮುಕೇಶ್ ಖನ್ನಾ ಹೇಳಿದ್ದಾರೆ. ಶಕ್ತಿಮಾನ್ ಸಿನಿಮಾವನ್ನು ತಮ್ಮನ್ನು ಸಂಪರ್ಕಿಸಿ ನಿರ್ಮಿಸಬೇಕು ಎಂಬುದು ತಮ್ಮ ಬೇಡಿಕೆಯಾಗಿತ್ತು. ಆದರೆ ನಿರ್ಮಾಪಕರು ತಮ್ಮದೇ ನಿಯಮಗಳಲ್ಲಿ ಸಿನಿಮಾ ಮಾಡಲು ಮುಂದಾದರು ಎಂಬುದು ಅವರ ಆರೋಪ.
"ನಾಳೆ ಶಕ್ತಿಮಾನ್‌ನನ್ನು ಡಿಸ್ಕೋದಲ್ಲಿ ಕುಣಿಸಿದರೆ ನಾನು ಸಹಿಸುವುದಿಲ್ಲ. ಶಕ್ತಿಮಾನ್ ಪರಂಪರೆಯನ್ನು ಉಳಿಸುವುದು ನನ್ನ ಜವಾಬ್ದಾರಿ" ಎಂಬ ಖಡಕ್ ನಿಲುವಿನೊಂದಿಗೆ ಮುಕೇಶ್ ಖನ್ನಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

