Dailyhunt Logo
  • Light mode
    Follow system
    Dark mode
    • Play Story
    • App Story
ರೇಣುಕಾಸ್ವಾಮಿ ಕೇಸ್‌ಗೆ ಹೊಸ ಟ್ವಿಸ್ಟ್: ಸಾಕ್ಷಿಗೆ ಕಾರಿನಲ್ಲಿ ಕೂರಿಸಿ ಬೆದರಿಕೆ, FIRನಲ್ಲಿ ನಾಲ್ವರ ಹೆಸರು!

ರೇಣುಕಾಸ್ವಾಮಿ ಕೇಸ್‌ಗೆ ಹೊಸ ಟ್ವಿಸ್ಟ್: ಸಾಕ್ಷಿಗೆ ಕಾರಿನಲ್ಲಿ ಕೂರಿಸಿ ಬೆದರಿಕೆ, FIRನಲ್ಲಿ ನಾಲ್ವರ ಹೆಸರು!

AIN Kannada 1 week ago

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡುವೆ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಸಾಕ್ಷಿದಾರ ಸಂದೀಪ್ ಅವರಿಗೆ ಒಬ್ಬರಲ್ಲ, ನಾಲ್ವರು ಸೇರಿ ಕೋರ್ಟ್‌ನಲ್ಲಿ ಹೇಳಿಕೆ ಬದಲಾಯಿಸುವಂತೆ ಒತ್ತಡ ಹೇರಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತುಮಕೂರಿನ ಖಾಸಗಿ ಬಾರ್‌ನಲ್ಲಿ ಕ್ಯಾಷಿಯರ್ ಆಗಿರುವ ಸಂದೀಪ್ ಅವರನ್ನು ಜೂನ್ 25ರಂದು ಆಕರ್ಷ್ ಎಂಬಾತ ಕರೆ ಮಾಡಿ ಭೇಟಿ ಮಾಡಲು ಕರೆದಿದ್ದಾನೆ ಎನ್ನಲಾಗಿದೆ. ಬಳಿಕ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಬಿಳಿ ಬಣ್ಣದ ಹ್ಯುಂಡೈ ವೆರ್ನಾ ಕಾರಿನಲ್ಲಿ ಕೂರಿಸಿಕೊಂಡು ನ್ಯಾಯಾಲಯದಲ್ಲಿ ಏನು ಹೇಳಿದ್ದೀರಿ ಎಂದು ಪ್ರಶ್ನಿಸಲಾಗಿದೆ.

ಆ ಬಳಿಕ ಕಾರಿನಲ್ಲಿಯೇ ಮೊಬೈಲ್ ಕಸಿದುಕೊಂಡು ವಾಟ್ಸಾಪ್ ಕರೆ ಮಾಡಲಾಗಿದ್ದು, ಲೌಡ್ ಸ್ಪೀಕರ್‌ನಲ್ಲಿ ನಾಲ್ವರು ಮಾತನಾಡಿದ್ದಾರೆ ಎಂದು ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ. ರಾಘವೇಂದ್ರ, ಅನಿಲ್ ಕುಮಾರ್ ಹಾಗೂ ಜಗದೀಶ್ ಹೆಸರುಗಳನ್ನು ಪ್ರಸ್ತಾಪಿಸಿ, "ಪೊಲೀಸರು ಬಂದು ಸಿಸಿಟಿವಿ ಹಾಗೂ ಡಿವಿಆರ್ ತೆಗೆದುಕೊಂಡು ಹೋದರು, ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಕೋರ್ಟ್‌ನಲ್ಲಿ ಹೇಳಬೇಕು" ಎಂದು ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿದೆ.

ಇದರ ಜೊತೆಗೆ ಬಿಳಿ ಹಾಳೆಯ ಮೇಲೆ ಸಹಿ ಮಾಡುವಂತೆ ಒತ್ತಾಯಿಸಿ, ಕೋರ್ಟ್‌ನಲ್ಲಿ ಸಹಕರಿಸಿದರೆ ನೋಡಿಕೊಳ್ಳುವುದಾಗಿ ಆಮಿಷವೊಡ್ಡಲಾಗಿದೆ ಎಂಬುದೂ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

ಈ ದೂರಿನ ಆಧಾರದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News