ಚಿತ್ರದುರ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿರುವ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕಾಂಗ್ರೆಸ್ ಶಾಸಕ ಕೆ.ಸಿ.
ವೀರೇಂದ್ರ ಪಪ್ಪಿ ತಮ್ಮ ನಿವಾಸದಲ್ಲಿ ವಿಶೇಷ ಹೋಮ-ಹವನ ಹಾಗೂ ಪೂಜೆ ಸಲ್ಲಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಚಳ್ಳಕೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಹೋಮ-ಹವನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಅವರ ಪತ್ನಿ ಚೈತ್ರಾ, ತಾಯಿ ರತ್ನಮ್ಮ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಆಪ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದಿರುವುದು ಹಲವು ರಾಜಕೀಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಯುವ ಕೋಟಾದಡಿ ಸಚಿವ ಸ್ಥಾನಕ್ಕಾಗಿ ಕೆ.ಸಿ. ವೀರೇಂದ್ರ ಪಪ್ಪಿ ಅವರ ಹೆಸರು ಕೇಳಿಬರುತ್ತಿರುವ ಹಿನ್ನೆಲೆ, ಈ ಪೂಜೆಗೆ ಮತ್ತಷ್ಟು ಮಹತ್ವ ಲಭಿಸಿದೆ.
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್‌ನ ಯುವ ನಾಯಕರಲ್ಲಿ ಗುರುತಿಸಿಕೊಂಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿರುವ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ತೀರ್ಮಾನ ಕೈಗೊಳ್ಳಬೇಕಿರುವ ನಡುವೆಯೇ ವೀರೇಂದ್ರ ಪಪ್ಪಿ ನಿವಾಸದಲ್ಲಿ ನಡೆದ ಹೋಮ-ಹವನ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

