Dailyhunt Logo
  • Light mode
    Follow system
    Dark mode
    • Play Story
    • App Story
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

AIN Kannada 6 days ago

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಭಾರೀ ಅಸಮಾಧಾನ ವ್ಯಕ್ತವಾಗಿದ್ದು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರಿದ್ದರೂ ಯಾರಿಗೂ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಕಾರವಾರ ಶಾಸಕ ಸತೀಶ್ ಸೈಲ್, ಭಟ್ಕಳ ಶಾಸಕ ಮಂಕಾಳು ವೈದ್ಯ, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಸಿದ್ದಾಪುರ ಕ್ಷೇತ್ರದ ಭೀಮಣ್ಣ ನಾಯ್ಕ ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಗೆದ್ದಿದ್ದರೂ ಜಿಲ್ಲೆಯ ಯಾರಿಗೂ ಸಚಿವ ಸ್ಥಾನ ಸಿಗದಿರುವುದು ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಯುವ ಕಾಂಗ್ರೆಸ್ ಪ್ರಕಟಣೆಯಲ್ಲಿ, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ನಿಷ್ಠೆ ಮತ್ತು ಭಾವನೆಗಳಿಗೆ ಯಾವುದೇ ಬೆಲೆ ಸಿಕ್ಕಿಲ್ಲ. ವಿಶೇಷವಾಗಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ. ಈ ಕಾರಣದಿಂದ ಕ್ಷೇತ್ರದ ಎಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ರಾಜೀನಾಮೆ ನೀಡಿದವರಲ್ಲಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ನೂತನ ಜೈನ, ಉಪಾಧ್ಯಕ್ಷ ದರ್ಶನ್ ನಾಯ್ಕ್, ಕಾರವಾರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್ ರಾಣೆ, ನಾಗರಾಜ್ ಪಡ್ತಿ, ಅಭಿನಂದನ್ ಬಾಡಕರ್, ವಿಶಾಲ್, ಸೋಮು, ಗೌರೀಶ್, ರಾಹುಲ್, ಮಯೂರ್, ವೈಭವ, ಸೂರಜ್ ಸೇರಿದಂತೆ ಹಲವರು ಇದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಮೋದ್ (ಸುಬ್ರಹ್ಮಣ್ಯ) ಶಿರಸಿಕರ್, ರಾಜೀನಾಮೆ ಪತ್ರವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದು ಮಾತ್ರ, ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ರಾಜೀನಾಮೆ ನೀಡಿದವರು ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಸಭೆ ಅಥವಾ ಸಂಘಟನಾ ಚಟುವಟಿಕೆಯಲ್ಲಿ ಭಾಗವಹಿಸಿರಲಿಲ್ಲ. ಅವರನ್ನು ಕಾರ್ಯಕಾರಿಣಿ ಸಭೆಯಲ್ಲಿ ಹುದ್ದೆಯಿಂದ ಅಮಾನತುಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿತ್ತು. ಅದನ್ನು ತಿಳಿಸಿದ ಬೆನ್ನಲ್ಲೇ ಅವರು ರಾಜೀನಾಮೆ ಘೋಷಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News