Dailyhunt Logo
  • Light mode
    Follow system
    Dark mode
    • Play Story
    • App Story
ಶಾಸಕ ಚಂದ್ರು ಲಮಾಣಿ ವಿರುದ್ಧ ಮೃತ ಚಾಲಕ ಕುಟುಂಬದ ಗಂಭೀರ ಆರೋಪ; ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಶಾಸಕ ಚಂದ್ರು ಲಮಾಣಿ ವಿರುದ್ಧ ಮೃತ ಚಾಲಕ ಕುಟುಂಬದ ಗಂಭೀರ ಆರೋಪ; ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

AIN Kannada 1 week ago

ದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಸುನೀಲ್ ಲಮಾಣಿ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 2025ರ ಜನವರಿ 9ರಂದು ನಡೆದಿದ್ದ ಈ ಪ್ರಕರಣದಲ್ಲಿ ಮೃತನ ಕುಟುಂಬಸ್ಥರು ಇದೀಗ ಶಾಸಕರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಮೃತ ಸುನೀಲ್ ಲಮಾಣಿ ಶಾಸಕ ಚಂದ್ರು ಲಮಾಣಿ ಅವರ ಕಾರು ಚಾಲಕರಾಗಿದ್ದು, ಶಾಸಕರ ನಿವಾಸದಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದ್ದರೂ, ಇದೀಗ ಮೃತನ ತಂದೆ, ತಾಯಿ ಹಾಗೂ ಸಹೋದರ ಹೊಸ ಆರೋಪಗಳನ್ನು ಮುಂದಿಟ್ಟಿದ್ದಾರೆ.

ಶಾಸಕರ ಅವ್ಯವಹಾರಗಳ ಬಗ್ಗೆ ಸುನೀಲ್‌ಗೆ ಮಾಹಿತಿ ಇದ್ದ ಕಾರಣ ಆತನಿಗೆ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿತ್ತು. ಕೆಲಸ ಮಾಡಿಸಿಕೊಂಡರೂ ವೇತನವನ್ನು ಸಮರ್ಪಕವಾಗಿ ನೀಡಿರಲಿಲ್ಲ. ಇದೇ ಒತ್ತಡದಿಂದ ಸುನೀಲ್ ಸಾವನ್ನಪ್ಪಿದ್ದಾನೆ ಎಂಬ ಅನುಮಾನ ನಮಗಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಇದರ ಜೊತೆಗೆ, ಪ್ರಕರಣವನ್ನು ಮುಂದುವರಿಸಿದರೆ "ನಿಮ್ಮ ದೊಡ್ಡ ಮಗ ಕೂಡ ಬೀದಿ ಹೆಣವಾಗ್ತಾನೆ" ಎಂದು ಶಾಸಕ ಚಂದ್ರು ಲಮಾಣಿ ಬೆದರಿಕೆ ಹಾಕಿದ್ದಾರೆ ಎಂದು ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಸಹ ಜೀವ ಬೆದರಿಕೆ ಹಾಕಿದ್ದು, ಮರಣೋತ್ತರ ಪರೀಕ್ಷೆಯ ವರದಿ ಪಡೆಯಲು ಒಂದು ವರ್ಷ ಅಲೆದಾಡುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಘಟನೆ ನಡೆದ ದಿನವೂ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತಮ್ಮವರು ಸ್ಥಳಕ್ಕೆ ಬರುವ ಮುನ್ನವೇ ಪೊಲೀಸರು ಅವಸರದಲ್ಲಿ ಶವವನ್ನು ಸ್ಥಳಾಂತರಿಸಿದ್ದಾರೆ. ಸುನೀಲ್ ಕತ್ತಿನ ಭಾಗದಲ್ಲಿ ರಕ್ತದ ಗುರುತು ಕಂಡಿದ್ದು, ಆತ್ಮಹತ್ಯೆಯಾಗಿದ್ದರೆ ಸಾಮಾನ್ಯವಾಗಿ ಕಾಣುವ ಲಕ್ಷಣಗಳು ಇರಲಿಲ್ಲ. ಹೀಗಾಗಿ ಇದು ಆತ್ಮಹತ್ಯೆಯಲ್ಲ, ಕೊಲೆ ಇರಬಹುದೆಂಬ ಅನುಮಾನ ಅಂದಿನಿಂದಲೇ ನಮಗಿತ್ತು ಎಂದು ಕುಟುಂಬಸ್ಥರು ಪುನರುಚ್ಚರಿಸಿದ್ದಾರೆ.

ಒಂದು ವರ್ಷದಿಂದ ಮೌನವಾಗಿದ್ದ ಈ ಪ್ರಕರಣದಲ್ಲಿ ಇದೀಗ ಕುಟುಂಬಸ್ಥರ ಹೊಸ ಆರೋಪಗಳು ಹೊರಬಿದ್ದಿರುವುದರಿಂದ, ಸುನೀಲ್ ಲಮಾಣಿ ಸಾವಿನ ಪ್ರಕರಣ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News