ಬೆಂಗಳೂರು: ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ರಾಜ್ಯ ಸರ್ಕಾರ ಆಗಸ್ಟ್ 15ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಮೂಲಕ ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಹೆಚ್ಚುವರಿ ಸಮಯ ನೀಡಲಾಗಿದೆ.
ಈ ಹಿಂದೆ ಜೂನ್ 30ರಿಂದ 15 ದಿನಗಳೊಳಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿತ್ತು.
ಆದರೆ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದ ಅನ್ವಯ ಆ ಆದೇಶಕ್ಕೆ ತಿದ್ದುಪಡಿ ಮಾಡಿ, ಅರ್ಜಿ ಸಲ್ಲಿಕೆಯ ಗಡುವನ್ನು ಆಗಸ್ಟ್ 15ರವರೆಗೆ ವಿಸ್ತರಿಸಲಾಗಿದೆ.
ಇದರ ಜೊತೆಗೆ ಗ್ರಾಮೀಣ ಪ್ರದೇಶಗಳ ಕೋಳಿ ಸಾಕಾಣಿಕೆ ಕೇಂದ್ರಗಳು ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರ (Possession Certificate) ಸಲ್ಲಿಸುವ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಭಾಗದ ರೈತರು, ಕೋಳಿ ಸಾಕಾಣಿಕೆದಾರರು ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

