ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳು ಬಹುತೇಕ ಖಚಿತವಾಗಿವೆ ಎನ್ನಲಾಗುತ್ತಿದೆ.
ರಾಜ್ಯಪಾಲರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಬಳಿಕ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಲಿದೆ. ಇದೇ ವೇಳೆ, ಶುಕ್ರವಾರ ಉಪರಾಷ್ಟ್ರಪತಿಗಳು ಬೆಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆ ರಾಜ್ಯಪಾಲರು ಕಾರ್ಯದ ಒತ್ತಡದಲ್ಲಿದ್ದು, ಶುಕ್ರವಾರ ಸಂಜೆಯೊಳಗೆ ರಾಜೀನಾಮೆ ಅಂಗೀಕಾರವಾಗುವ ಸಾಧ್ಯತೆ ಇದೆ.
ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ನಿರೀಕ್ಷೆಯಿದ್ದು, ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಸಿಎಲ್‌ಪಿ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಡಿಕೆಶಿ ಮುಖ್ಯಮಂತ್ರಿ ಪದಗ್ರಹಣ ಮಾಡುವ ಸಾಧ್ಯತೆಗಳಿವೆ.
ಪ್ರಮಾಣವಚನ ಸಮಾರಂಭವನ್ನು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಹಿಂದೂ ಸಂಪ್ರದಾಯದಲ್ಲಿ ಗೋಧೂಳಿ ಸಮಯವನ್ನು ಅತ್ಯಂತ ಮಂಗಳಕರ ಕಾಲವೆಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ಮುನ್ನ ಹಾಗೂ ನಂತರದ ಅವಧಿಯನ್ನು ಗೋಧೂಳಿ ಕಾಲ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಂಜೆ 5ರಿಂದ 7 ಗಂಟೆಯೊಳಗಿನ ಅವಧಿ ಗೋಧೂಳಿ ಸಮಯವಾಗಿರುತ್ತದೆ.
ಈ ವೇಳೆಯಲ್ಲಿ ಹಸುಗಳು ಮತ್ತು ಪಕ್ಷಿಗಳು ತಮ್ಮ ನಿವಾಸಗಳಿಗೆ ಮರಳುವ ಹಿನ್ನೆಲೆಯಲ್ಲಿ ಇದನ್ನು ಶುಭದ ಸಂಕೇತವೆಂದು ನಂಬಲಾಗಿದೆ. ಲಕ್ಷ್ಮೀದೇವಿಯ ಆಗಮನದ ಸಮಯ ಎಂಬ ನಂಬಿಕೆಯೂ ಇರುವುದರಿಂದ ಗೋಧೂಳಿ ಮುಹೂರ್ತದಲ್ಲಿ ಶುಭ ಕಾರ್ಯಗಳನ್ನು ನಡೆಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭ ಗೋಧೂಳಿ ಮುಹೂರ್ತದಲ್ಲಿ ನಡೆಯುವ ಸಾಧ್ಯತೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

