ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಮೂಲಕ ಅವರ ಎರಡನೇ ಅವಧಿಯ ಆಡಳಿತಕ್ಕೆ ತೆರೆ ಬಿದ್ದಿದೆ. ರಾಜ್ಯ ರಾಜಕೀಯದಲ್ಲಿ ಐದು ದಶಕಗಳ ಕಾಲ ಪ್ರಭಾವ ಬೀರಿದ ಸಿದ್ದರಾಮಯ್ಯ, ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
1983ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದ ಸಿದ್ದರಾಮಯ್ಯ, ಬಳಿಕ ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ಹಲವು ಬಾರಿ ಸಚಿವರಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು 'ಅಹಿಂದ' ರಾಜಕಾರಣದ ಪ್ರಮುಖ ಮುಖವಾಗಿ ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾರೆ.
ಸಿದ್ದರಾಮಯ್ಯ ರಾಜಕೀಯ ಪಯಣ
ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿ ಗ್ರಾಮದವರಾದ ಸಿದ್ದರಾಮಯ್ಯ, 1983ರಲ್ಲಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ನಂತರ ಜನತಾ ಪಕ್ಷ ಹಾಗೂ ಜನತಾ ದಳದಲ್ಲಿ ಸಕ್ರಿಯ ರಾಜಕಾರಣ ನಡೆಸಿದ ಅವರು, ಕನ್ನಡ ಮತ್ತು ಸಂಸ್ಕೃತಿ, ಪಶುಸಂಗೋಪನೆ ಸೇರಿದಂತೆ ಹಲವು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದರು.
ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರದಲ್ಲಿ 1996ರಿಂದ 1999ರವರೆಗೆ ಹಾಗೂ ಧರಂಸಿಂಗ್ ಸರ್ಕಾರದಲ್ಲಿ 2004ರಿಂದ 2005ರವರೆಗೆ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.
2008ರಿಂದ 2013ರವರೆಗೆ ಹಾಗೂ 2019ರಿಂದ 2023ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದರು.
2013ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, 2013ರಿಂದ 2018ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ಬಳಿಕ 2023ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
9 ಬಾರಿ ಶಾಸಕರಾಗಿ ಆಯ್ಕೆ
ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಅಪರೂಪದ ಸಾಧನೆ ಮಾಡಿದ್ದಾರೆ.
- 1983 - ಚಾಮುಂಡೇಶ್ವರಿ (ಪಕ್ಷೇತರ)
- 1985 - ಚಾಮುಂಡೇಶ್ವರಿ (ಜನತಾ ಪಕ್ಷ)
- 1994 - ಚಾಮುಂಡೇಶ್ವರಿ (ಜನತಾ ದಳ)
- 2004 - ಚಾಮುಂಡೇಶ್ವರಿ (ಜೆಡಿಎಸ್)
- 2006 - ಉಪಚುನಾವಣೆ, ಚಾಮುಂಡೇಶ್ವರಿ
- 2008 - ವರುಣಾ (ಕಾಂಗ್ರೆಸ್)
- 2013 - ವರುಣಾ (ಕಾಂಗ್ರೆಸ್)
- 2018 - ಬಾದಾಮಿ (ಕಾಂಗ್ರೆಸ್)
- 2023 - ವರುಣಾ (ಕಾಂಗ್ರೆಸ್)
ಕಾಂಗ್ರೆಸ್ ಸೇರ್ಪಡೆ ಬಳಿಕ ಹೊಸ ಅಧ್ಯಾಯ
ಜೆಡಿಎಸ್‌ನಲ್ಲಿ ಪ್ರಮುಖ ನಾಯಕರಾಗಿದ್ದ ಸಿದ್ದರಾಮಯ್ಯ, ಎಚ್.ಡಿ. ದೇವೇಗೌಡರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ 2005ರಲ್ಲಿ ಪಕ್ಷ ತೊರೆದರು. ಬಳಿಕ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
2006ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು, 2008 ಮತ್ತು 2013ರ ಚುನಾವಣೆಯಲ್ಲಿಯೂ ಜಯಗಳಿಸಿದರು.
2018ರಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಅಲ್ಪ ಅಂತರದಲ್ಲಿ ಗೆಲುವು ದಾಖಲಿಸಿದ್ದರು.
2023ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸಿದ ಅವರು, ಕಾಂಗ್ರೆಸ್‌ಗೆ ಪ್ರಚಂಡ ಬಹುಮತ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಳಿಕ ಮೇ 20ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಮತ್ತೊಂದು ಮಹತ್ವದ ತಿರುವು ಪಡೆದಿದೆ.

