ಬೆಂಗಳೂರು: ಕೆ.ಆರ್. ಸರ್ಕಲ್‌ನಲ್ಲಿ ಸಿಗ್ನಲ್‌ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ಗೆ ಮತ್ತೊಂದು ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಚಾಲಕರು ಹಾಗೂ ಪ್ರಯಾಣಿಕರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪಘಾತ ಎಸಗಿದ ಬಸ್ ಚಾಲಕ ಅಭಿಷೇಕ್ ವಿರುದ್ಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಶಾಂತಿನಗರ 3ನೇ ಬಿಎಂಟಿಸಿ ಡಿಪೋಗೆ ಸೇರಿದ ಕೆಎ-51 ಎಜೆ 6163 ಸಂಖ್ಯೆಯ ಬಸ್ ಅನ್ನು ಚಾಲಕ ಅಭಿಷೇಕ್ ಚಲಾಯಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಕೆ.ಆರ್. ಸರ್ಕಲ್‌ನಲ್ಲಿ ರೆಡ್ ಸಿಗ್ನಲ್ ಇದ್ದ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳು ನಿಂತಿದ್ದವು. ಈ ವೇಳೆ ಸಿಗ್ನಲ್ ಉಲ್ಲಂಘಿಸಿ ವೇಗವಾಗಿ ಬಂದ ಬಸ್, ಮುಂದೆ ನಿಂತಿದ್ದ ಮತ್ತೊಂದು ಬಿಎಂಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದೂರುದಾರರ ಎಡಗಾಲಿನ ಮೂಳೆ ಮುರಿದಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶರಣಮ್ಮ ಎಂಬ ಮಹಿಳಾ ಪ್ರಯಾಣಿಕರ ದವಡೆಯ ಹಲ್ಲು ಮುರಿದಿದ್ದು, ಸಿಗ್ನಲ್‌ನಲ್ಲಿ ನಿಂತಿದ್ದ ಬಸ್‌ನ ಚಾಲಕ ಪ್ರಕಾಶ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ, ಅಭಿಷೇಕ್ ವಿರುದ್ಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

