ಅದ್ಧೂರಿಯಾಗಿ ಅಂತ್ಯಗೊಂಡ ಐಪಿಎಲ್ 2026 ಸೀಸನ್‌ನಲ್ಲಿ ಕೆಲವು ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದರೆ, ಕೆಲವರು ದೊಡ್ಡ ಮೊತ್ತದ ಹರಾಜಿನ ಹೊರತಾಗಿಯೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಅಂತಹ ಆಟಗಾರರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಪ್ರಮುಖರಾಗಿದ್ದಾರೆ.
ಹರಾಜಿನಲ್ಲಿ 13 ಕೋಟಿ ರೂ. ನೀಡಿ ತಂಡ ಸೇರಿಸಿಕೊಂಡಿದ್ದ SRH ಮ್ಯಾನೇಜ್‌ಮೆಂಟ್, ಮಧ್ಯಮ ಕ್ರಮಾಂಕದಲ್ಲಿ ಸಿಕ್ಸರ್‌ಗಳ ಮಳೆ ಸುರಿಯುತ್ತಾರೆ ಎಂಬ ನಿರೀಕ್ಷೆ ಇಟ್ಟಿತ್ತು.
ಆದರೆ ಈ ಸೀಸನ್‌ನಲ್ಲಿ ಲಿವಿಂಗ್‌ಸ್ಟನ್‌ಗೆ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಅವಕಾಶ ದೊರೆತಿದ್ದು, ಆ ಎರಡು ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 15 ರನ್ ಮಾತ್ರ ಗಳಿಸಿದ್ದಾರೆ. ಇದರರ್ಥ ಅವರು ಪ್ರತಿಯೊಂದು ರನ್‌ಗೂ ಭಾರಿ ವೆಚ್ಚವಾಗಿರುವಂತೆ ಕಾಣಿಸಿದ್ದು, ಒಂದು ರನ್‌ಗೆ ತಂಡದ ಖರ್ಚು ಲಕ್ಷಾಂತರ ರೂಪಾಯಿಗಳ ಮಟ್ಟಕ್ಕೆ ತಲುಪಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಹಿಂದಿನ ಸೀಸನ್‌ಗಳಲ್ಲಿ ಕೂಡ ಲಿವಿಂಗ್‌ಸ್ಟನ್ ಪ್ರದರ್ಶನ ಮಿಶ್ರವಾಗಿತ್ತು. ಆರ್‌ಸಿಬಿ ಪರ 8.75 ಕೋಟಿ ರೂ.ಗಳಿಗೆ ಆಡಿದ ವೇಳೆ 10 ಪಂದ್ಯಗಳಲ್ಲಿ ಕೇವಲ 112 ರನ್ ಗಳಿಸಿದ್ದರು. 2024ರಲ್ಲಿ ಮತ್ತೊಂದು ಕಡಿಮೆ ಪ್ರದರ್ಶನ ನೀಡಿದ್ದ ಅವರು 7 ಪಂದ್ಯಗಳಲ್ಲಿ 111 ರನ್ ಮಾತ್ರ ಗಳಿಸಿದ್ದರು. ಆದರೆ 2022ರಲ್ಲಿ ಪಂಜಾಬ್ ಕಿಂಗ್ಸ್ ಪರ 437 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದ್ದರು.
ನಿರಂತರ ವೈಫಲ್ಯಗಳ ಹಿನ್ನೆಲೆಯಲ್ಲಿ SRH ತಂಡದ ಮಾಲಕಿ ಕಾವ್ಯಾ ಮಾರನ್ ಅವರ ಹೂಡಿಕೆ ನಿರ್ಧಾರವೂ ಈಗ ಟೀಕೆಗೆ ಗುರಿಯಾಗಿದೆ. ಮುಂದಿನ ಸೀಸನ್‌ಗೆ ಮುನ್ನ ಲಿವಿಂಗ್‌ಸ್ಟನ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳೂ ಇರುವುದಾಗಿ ಕ್ರೀಡಾ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

