Dailyhunt Logo
  • Light mode
    Follow system
    Dark mode
    • Play Story
    • App Story
'ಟಾಕ್ಸಿಕ್' ಚಿತ್ರದಿಂದ 'ತಬಾಹಿ' ವಿಡಿಯೋ ಸಾಂಗ್ ಔಟ್: ರಾಯ-ರುಮಿ ರೊಮ್ಯಾನ್ಸ್ʼಗೆ ಫ್ಯಾನ್ಸ್ ಫಿದಾ

'ಟಾಕ್ಸಿಕ್' ಚಿತ್ರದಿಂದ 'ತಬಾಹಿ' ವಿಡಿಯೋ ಸಾಂಗ್ ಔಟ್: ರಾಯ-ರುಮಿ ರೊಮ್ಯಾನ್ಸ್ʼಗೆ ಫ್ಯಾನ್ಸ್ ಫಿದಾ

AIN Kannada 2 weeks ago

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ವಿಡಿಯೊ ಸಾಂಗ್ 'ತಬಾಹಿ' ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಹಾಡಿನಲ್ಲಿ ಯಶ್ ಹಾಗೂ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿ ಮತ್ತು ಅದ್ದೂರಿ ದೃಶ್ಯ ವೈಭವ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

'ಟಾಕ್ಸಿಕ್' ಸಿನಿಮಾ ಇದೇ ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರ ಕಾರ್ಯಕ್ಕೆ ವೇಗ ನೀಡಿರುವ ಚಿತ್ರತಂಡ 'ತಬಾಹಿ' ವಿಡಿಯೊ ಸಾಂಗ್ ಅನ್ನು ಬುಧವಾರ ಬೆಳಿಗ್ಗೆ 11.33ಕ್ಕೆ ಅನಾವರಣಗೊಳಿಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಹಾಗೂ ಲಿರಿಕಲ್ ವಿಡಿಯೊ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರತಂಡ ಇದೀಗ ಪೂರ್ಣ ಪ್ರಮಾಣದ ವಿಡಿಯೊ ಹಾಡಿನ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಾಡಿನ ಉದ್ದಕ್ಕೂ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ರೊಮ್ಯಾಂಟಿಕ್ ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿದ್ದು, ಇಬ್ಬರೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ 'ರಾಯ್' ಪಾತ್ರದಲ್ಲಿ ನಟಿಸಿದ್ದರೆ, ಕಿಯಾರಾ 'ರುಮಿ' ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಡಿನ ಒಂದು ದೃಶ್ಯದಲ್ಲಿ ನಟಿ ನಯನತಾರಾ ಕೂಡ ಕಾಣಿಸಿಕೊಳ್ಳುವುದು ವಿಶೇಷ.

'ತಬಾಹಿ' ಕೇವಲ ಹಾಡಾಗಿ ಮಾತ್ರವಲ್ಲದೆ, ಚಿತ್ರದ ಅದ್ದೂರಿ ನಿರ್ಮಾಣ, ಭವ್ಯ ದೃಶ್ಯಗಳು ಹಾಗೂ ತಾಂತ್ರಿಕ ಗುಣಮಟ್ಟದ ಝಲಕ್ ನೀಡುವ ರೀತಿಯಲ್ಲಿ ಮೂಡಿಬಂದಿದೆ. ಹಾಡಿಗೆ ಖ್ಯಾತ ಸಾಹಿತಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಈಗಾಗಲೇ ಬಿಡುಗಡೆಯಾದ ಲಿರಿಕಲ್ ಆವೃತ್ತಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಿರುವ 'ಟಾಕ್ಸಿಕ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ. ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್-ವಲ್ಡ್ ಸಿನಿಮಾದಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ ನಯನತಾರಾ, ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವ 'ಟಾಕ್ಸಿಕ್' ಚಿತ್ರವು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗಲಿದ್ದು, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News