Dailyhunt Logo
  • Light mode
    Follow system
    Dark mode
    • Play Story
    • App Story
'ಟಾಕ್ಸಿಕ್' ರಿವ್ಯೂಗೆ ಲೀಗಲ್ ನೋಟಿಸ್! ಸಿನಿಮಾ ರಿಲೀಸ್ ಆದ ಮರುದಿನವೇ ಯೂಟ್ಯೂಬರ್‌ಗೆ ಕಾನೂನು ಶಾಕ್

'ಟಾಕ್ಸಿಕ್' ರಿವ್ಯೂಗೆ ಲೀಗಲ್ ನೋಟಿಸ್! ಸಿನಿಮಾ ರಿಲೀಸ್ ಆದ ಮರುದಿನವೇ ಯೂಟ್ಯೂಬರ್‌ಗೆ ಕಾನೂನು ಶಾಕ್

AIN Kannada 2 weeks ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಕಾನೂನು ಸಮರದ ಚರ್ಚೆ ಮುನ್ನೆಲೆಗೆ ಬಂದಿದೆ. ಚಿತ್ರದ ಕುರಿತು ಸುಳ್ಳು, ನಿಂದನಾತ್ಮಕ ಹಾಗೂ ಕಾಪಿರೈಟ್ ಉಲ್ಲಂಘನೆಯ ವಿಷಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳದಂತೆ ಬಿಡುಗಡೆಗೂ ಮುನ್ನವೇ ಮಧ್ಯಂತರ ತಡೆಯಾಜ್ಞೆ ತರಲಾಗಿತ್ತು.

ಇದೀಗ ಸಿನಿಮಾ ಬಿಡುಗಡೆಯಾದ ಮರುದಿನವೇ ತಮ್ಮ ರಿವ್ಯೂ ವೀಡಿಯೊಗೆ ಸಂಬಂಧಿಸಿದಂತೆ ಚಿತ್ರತಂಡದಿಂದ ಲೀಗಲ್ ನೋಟಿಸ್ ಬಂದಿದೆ ಎಂದು ಯೂಟ್ಯೂಬರ್ ಸೂರಜ್ ಕುಮಾರ್ ತಿಳಿಸಿದ್ದಾರೆ.

ಸೂರಜ್ ಕುಮಾರ್ ತಮ್ಮ 'ಎಕ್ಸ್' ಖಾತೆಯಲ್ಲಿ ಲೀಗಲ್ ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಬೆಂಗಳೂರು ಮೂಲದ ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, 'ಟಾಕ್ಸಿಕ್' ನಿರ್ಮಾಪಕರಾದ ಕೆವಿಎನ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಪರವಾಗಿ ಈ ನೋಟಿಸ್ ನೀಡಿದೆ ಎನ್ನಲಾಗಿದೆ.

ನೋಟಿಸ್‌ನಲ್ಲಿ, ನಿರ್ಮಾಪಕರ ಹಕ್ಕುಸ್ವಾಮ್ಯ ಹೊಂದಿರುವ 'ಟಾಕ್ಸಿಕ್' ಸಿನಿಮಾಗೆ ಸಂಬಂಧಿಸಿದಂತೆ ಸೂರಜ್ ಕುಮಾರ್ ಡಿಜಿಟಲ್ ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಕಂಟೆಂಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಜುಲೈ 13ರಿಂದ ಸೆಪ್ಟೆಂಬರ್ 26ರವರೆಗೆ ಸಿನಿಮಾಗೆ ಸಂಬಂಧಿಸಿದ ಕಾಪಿರೈಟ್ ಉಲ್ಲಂಘನೆ, ಸುಳ್ಳು ಹಾಗೂ ನಿಂದನಾತ್ಮಕ ಕಂಟೆಂಟ್ ವಿರುದ್ಧ ಕ್ರಮ ಕೈಗೊಳ್ಳಲು, ಅಂತಹ ವೀಡಿಯೊಗಳನ್ನು ತೆಗೆದುಹಾಕಲು ಮತ್ತು ಡಿ-ಇಂಡೆಕ್ಸಿಂಗ್ ಮಾಡಲು ಐಪ್ಲೆಕ್ಸ್ ಸಂಸ್ಥೆಗೆ ನಿರ್ಮಾಪಕರು ಅಧಿಕಾರ ನೀಡಿರುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇತ್ತ ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಸೂರಜ್ ಕುಮಾರ್, "ನನ್ನ ರಿವ್ಯೂಗೆ ಲೀಗಲ್ ನೋಟಿಸ್ ನೀಡಿದ್ದಕ್ಕಾಗಿ ಟಾಕ್ಸಿಕ್ ಚಿತ್ರತಂಡಕ್ಕೆ ಧನ್ಯವಾದಗಳು" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಆಗಸ್ಟ್ 26ರಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ 'ಟಾಕ್ಸಿಕ್' ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಸಿನಿಮಾ ವಿಮರ್ಶಕರು ಹಾಗೂ ಯೂಟ್ಯೂಬರ್‌ಗಳಿಗೆ ಲೀಗಲ್ ನೋಟಿಸ್ ಅಥವಾ ಕಾಪಿರೈಟ್ ಕ್ರಮ ಕೈಗೊಳ್ಳುವ ವಿಚಾರ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News