ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ Harmanpreet Kaur ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ಹರ್ಮನ್‌ಪ್ರೀತ್ 200 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮ್ಯಾಂಚೆಸ್ಟರ್‌ನ ಐತಿಹಾಸಿಕ ಮೈದಾನದಲ್ಲಿ ನಡೆದ ಪಂದ್ಯವು ಹರ್ಮನ್‌ಪ್ರೀತ್ ಅವರ ವೃತ್ತಿಜೀವನದ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಯಿತು. ಇದುವರೆಗೆ ಯಾವುದೇ ಪುರುಷ ಅಥವಾ ಮಹಿಳಾ ಕ್ರಿಕೆಟರ್ ಈ ಸಾಧನೆ ಮಾಡಿರಲಿಲ್ಲ.
ಹರ್ಮನ್‌ಪ್ರೀತ್ ಕೌರ್ 2009ರಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಮೂಲಕ ತಮ್ಮ ಅಂತರರಾಷ್ಟ್ರೀಯ ಟಿ20 ಪಯಣ ಆರಂಭಿಸಿದ್ದರು. ಸುಮಾರು 17 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಸ್ಥಿರ ಪ್ರದರ್ಶನ, ನಾಯಕತ್ವ ಮತ್ತು ಫಿಟ್‌ನೆಸ್ ಮೂಲಕ ಅವರು ಈ ಅಪರೂಪದ ಮೈಲಿಗಲ್ಲು ತಲುಪಿದ್ದಾರೆ.
ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಲಿದೆ. ಈ ಹಿನ್ನೆಲೆಯಲ್ಲಿ ಹರ್ಮನ್‌ಪ್ರೀತ್ ಅವರ 200ನೇ ಪಂದ್ಯ ಮತ್ತಷ್ಟು ವಿಶೇಷವಾಗಿದೆ.
ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡ ಕಳೆದ ಕೆಲ ವರ್ಷಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದೆ. ಕೆಲ ತಿಂಗಳ ಹಿಂದಷ್ಟೇ ಭಾರತವನ್ನು ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಅವರು, ಇದೀಗ ಮಹಿಳಾ ಟಿ20 ವಿಶ್ವಕಪ್ ಗೆಲ್ಲಿಸುವ ಗುರಿಯೊಂದಿಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಹರ್ಮನ್‌ಪ್ರೀತ್ ಅವರ ಈ ಸಾಧನೆ ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವಂತಹ ಮೈಲಿಗಲ್ಲಾಗಿದ್ದು, ಯುವ ಆಟಗಾರ್ತಿಯರಿಗೆ ಪ್ರೇರಣೆಯಾಗಿದೆ.

