ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡದ ಮೇಲಿನ ಶೇ.50 ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್ 21ರಿಂದ ಜುಲೈ 4ರವರೆಗೆ ಕೇವಲ 14 ದಿನಗಳಲ್ಲಿ 18,15,42,200 ರೂ.
ದಂಡದ ಮೊತ್ತ ಸಂಗ್ರಹವಾಗಿದ್ದು, 6,06,032 ಬಾಕಿ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಸಂಚಾರ ಪೊಲೀಸರು, ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾಗಿದ್ದ ಬಾಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ.50 ರಿಯಾಯಿತಿಯಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಿತ್ತು. ಸರ್ಕಾರದ ಆದೇಶದಂತೆ ಈ ಯೋಜನೆ ಜೂನ್ 21ರಿಂದ ಜಾರಿಗೆ ಬಂದಿತ್ತು ಎಂದು ವಿವರಿಸಿದ್ದಾರೆ.
ರಿಯಾಯಿತಿ ಅವಧಿಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ವಾಹನ ಸವಾರರು ಬಾಕಿ ದಂಡವನ್ನು ಪಾವತಿಸಿದ್ದು, 14 ದಿನಗಳಲ್ಲೇ ಆರು ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಿಂದ ಒಟ್ಟು 18.15 ಕೋಟಿ ರೂ. ದಂಡದ ಮೊತ್ತ ಸರ್ಕಾರದ ಖಜಾನೆಗೆ ಸಂದಿದೆ.
ಇನ್ನೂ ಬಾಕಿ ದಂಡ ಪಾವತಿಸದ ವಾಹನ ಸವಾರರಿಗೆ ಜುಲೈ 10ರವರೆಗೆ ಶೇ.50 ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ದಂಡ ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಪಿಎಸ್‌ಐಗಳ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಸಂಚಾರ ಪೊಲೀಸರು ನಿರಂತರವಾಗಿ ನಡೆಸುತ್ತಿದ್ದಾರೆ.

