ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ಮೌಲ್ಯಮಾಪನಕ್ಕೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕದ ಬದಲು ಗ್ರೇಡ್ ನೀಡುವ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ನೂತನ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡ ಬಳಿಕ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಈ ನಿರ್ಧಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳ ಸಾಧನೆ ಸರಿಯಾಗಿ ಅಳೆಯಲು ಸಾಧ್ಯವಾಗುವುದಿಲ್ಲ ಹಾಗೂ ಉನ್ನತ ಶಿಕ್ಷಣ ಪ್ರವೇಶ ಮತ್ತು ಶೈಕ್ಷಣಿಕ ಸ್ಪರ್ಧೆಯ ಮೇಲೂ ಪರಿಣಾಮ ಬೀಳಬಹುದು ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲೂ ಪರೀಕ್ಷಾ ವೇಳೆಯಲ್ಲೇ ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ ಘೋಷಿಸಲಾಗಿತ್ತು. ನಿಯಮವನ್ನು ಮಧ್ಯದಲ್ಲೇ ಬದಲಾಯಿಸಿದ ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅನೇಕ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಬಳಿಕ ಹೈಕೋರ್ಟ್ ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕವೇ ನೀಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.
ಈ ಬಾರಿ ಅಂತಹ ಗೊಂದಲ ಮರುಕಳಿಸದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿಯಮ ಜಾರಿಗೆ ತರಲು ಇಲಾಖೆ ಸಿದ್ಧತೆ ನಡೆಸಿದೆ. ಈ ಕುರಿತು ಶಿಕ್ಷಣ ಇಲಾಖೆ ಆಯುಕ್ತರು ಮಾತನಾಡಿ, ಕಳೆದ ವರ್ಷಕ್ಕೆ ಮಾತ್ರ ಕೋರ್ಟ್ ಆದೇಶ ಅನ್ವಯವಾಗಿತ್ತು, ಈ ವರ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ, ಈಗಾಗಲೇ ಆದೇಶ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ SSLC ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವ ಬಗ್ಗೆ ಇಲಾಖೆ ಮುಂದಾಗಿರುವುದು ಸ್ಪಷ್ಟವಾಗಿದ್ದು, ಕಳೆದ ವರ್ಷದ ವಿವಾದದ ಬಳಿಕ ಈ ಬಾರಿ ನಿಯಮವನ್ನು ಮೊದಲೇ ಪ್ರಕಟಿಸುವ ಮೂಲಕ ಗೊಂದಲ ತಪ್ಪಿಸಲು ಮುಂದಾಗಿದೆ. ಆದರೆ ಈ ಗ್ರೇಡ್ ಪದ್ಧತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆಯೇ ಅಥವಾ ಮತ್ತೊಂದು ವಿವಾದಕ್ಕೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

