Dailyhunt Logo
  • Light mode
    Follow system
    Dark mode
    • Play Story
    • App Story
ತುಂಗಾ ಅಣೆಕಟ್ಟೆಯಿಂದ ನೀರು ಬಿಡುಗಡೆ; ಉಕ್ಕಡಗಾತ್ರಿ ಸ್ನಾನಘಟ್ಟ, ವ್ಯಾಪಾರ ಮಳಿಗೆಗಳು ಜಲಾವೃತ

ತುಂಗಾ ಅಣೆಕಟ್ಟೆಯಿಂದ ನೀರು ಬಿಡುಗಡೆ; ಉಕ್ಕಡಗಾತ್ರಿ ಸ್ನಾನಘಟ್ಟ, ವ್ಯಾಪಾರ ಮಳಿಗೆಗಳು ಜಲಾವೃತ

AIN Kannada 1 week ago

ದಾವಣಗೆರೆ: ಮಲೆನಾಡು ಭಾಗದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ತುಂಗಾಭದ್ರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ತುಂಗಾ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿದ್ದು, ಹರಿಹರ ತಾಲೂಕಿನ ಉಕ್ಕಡಗಾತ್ರಿ ಶ್ರೀಕ್ಷೇತ್ರದಲ್ಲಿ ಪ್ರವಾಹದ ಆತಂಕ ಎದುರಾಗಿದೆ.

ತುಂಗಾಭದ್ರಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿರುವುದರಿಂದ ಶ್ರೀಕ್ಷೇತ್ರ ಉಕ್ಕಡಗಾತ್ರಿಯ ಸಮೀಪದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕ್ಷೇತ್ರದ ಪಕ್ಕದಲ್ಲೇ ಹರಿಯುವ ನದಿ ಭೋರ್ಗರೆಯುತ್ತಿದ್ದು, ಭಕ್ತರು ನದಿ ಪಾತ್ರದತ್ತ ತೆರಳದಂತೆ ದೇವಾಲಯದ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

ನೀರಿನ ಹರಿವು ಹೆಚ್ಚಿದ ಪರಿಣಾಮ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟ, ಜವಳಘಟ್ಟ ಸೇರಿದಂತೆ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ವ್ಯಾಪಾರ ಮಳಿಗೆಗಳಿಗೂ ನೀರು ನುಗ್ಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರು ನದಿಗೆ ಇಳಿಯದಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.

ಇನ್ನೂ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದರೆ, ನದಿ ದಂಡೆಯಲ್ಲಿರುವ ಗಣೇಶ ದೇವಸ್ಥಾನವೂ ಜಲಾವೃತವಾಗುವ ಸಾಧ್ಯತೆ ಇದೆ. ಅಲ್ಲದೆ, ನದಿಯಲ್ಲಿ ನೀರಿನ ಸೆಳೆತ ಮತ್ತಷ್ಟು ಹೆಚ್ಚಾಗುವ ಕಾರಣ ದೇವಸ್ಥಾನ ಸಮಿತಿ ಅಪಾಯದ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸಲು ಮುಂದಾಗಿದೆ.

ಸದ್ಯ ನದಿಯಲ್ಲಿ ನೀರಿನ ಹರಿವು ನಿಯಂತ್ರಣದಲ್ಲಿದ್ದರೂ, ಮಳೆ ಮುಂದುವರಿದು ನೀರಿನ ಮಟ್ಟ ಮತ್ತಷ್ಟು ಏರಿದರೆ ಹರಿಹರ ತಾಲೂಕಿನ ನಂದಿಗುಡಿ-ಉಕ್ಕಡಗಾತ್ರಿ ಸಂಪರ್ಕ ರಸ್ತೆ ಮತ್ತು ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಭದ್ರಾ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರು ಹರಿಸಿದರೆ ಫತ್ತೇಪುರ್-ಉಕ್ಕಡಗಾತ್ರಿ ಸಂಪರ್ಕ ರಸ್ತೆ ಹಾಗೂ ಸೇತುವೆಯೂ ಜಲಾವೃತವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪರಿಸ್ಥಿತಿ ನಿರ್ಮಾಣವಾದರೆ ಉಕ್ಕಡಗಾತ್ರಿ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರು ಪರ್ಯಾಯ ಮಾರ್ಗ ಬಳಸುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News