Dailyhunt
ಉಡುಪಿಯಲ್ಲಿ ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್: 'ನಾನು ಕಾರಣ ಅಲ್ಲ' - ಪತ್ನಿ ಸೌಮ್ಯಾ ಸ್ಪಷ್ಟನೆ

ಉಡುಪಿಯಲ್ಲಿ ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್: 'ನಾನು ಕಾರಣ ಅಲ್ಲ' - ಪತ್ನಿ ಸೌಮ್ಯಾ ಸ್ಪಷ್ಟನೆ

AIN Kannada 2 weeks ago

ಡುಪಿ: ಕಾರ್ಕಳದಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಪತ್ನಿ ಸೌಮ್ಯಾ ಶೆಟ್ಟಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿಯಾದ ಸುದೀಪ್ ರೈ ಸಾವಿಗೆ ಪತ್ನಿಯೇ ಕಾರಣ ಎಂದು ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದರು.

ಆದರೆ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಸೌಮ್ಯಾ ಶೆಟ್ಟಿ, "ಪತಿಯ ಸಾವಿಗೆ ನಾನು ಕಾರಣಳಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ನೆಲ್ಯಾಡಿಯಲ್ಲಿ ತಾನು ಯಾವುದೇ ರಂಪಾಟ ಮಾಡಿಲ್ಲ ಎಂದು ಹೇಳಿರುವ ಅವರು, ಸುದೀಪ್ ಮನೆಯವರ ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪ್ರತಿಯಾಗಿ ಆರೋಪಿಸಿದ್ದಾರೆ. ಸುದೀಪ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡು ತಾನು ನೆಲ್ಯಾಡಿಗೆ ತೆರಳಿದ್ದೆ. ಅಲ್ಲಿ ಯಾವುದೇ ಗಲಾಟೆ ನಡೆಸಿಲ್ಲ. ಆದರೆ, ಸುದೀಪ್ ತಾಯಿ ತಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ಬೈದ ಕಾರಣ ಕಿರುಚಾಡಿದ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಮಾರ್ಚ್ 16ರಂದು ತಮ್ಮ ಮನೆಯಿಂದ ನೆಲ್ಯಾಡಿಗೆ ತೆರಳಿದ ಬಳಿಕ ಸುದೀಪ್ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತು. "ನಮ್ಮ ಮನೆಯವರು ಮದುವೆಯನ್ನು ಒಪ್ಪುತ್ತಿಲ್ಲ" ಎಂದು ಆತ ಹೇಳಿದ್ದನು. ಇದೇ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದು ಎಂದು ಸೌಮ್ಯಾ ತಿಳಿಸಿದ್ದಾರೆ.

ಇದೇ ವೇಳೆ, ವೇಣು ಶೆಟ್ಟಿ ವಿರುದ್ಧವೂ ಸೌಮ್ಯಾ ಗಂಭೀರ ಆರೋಪ ಮಾಡಿದ್ದಾರೆ. ನಾವು ಇಬ್ಬರೂ ರಂಗಭೂಮಿ ಕಲಾವಿದರು. ನನಗೆ ಆತನ ಪರಿಚಯ ಇರಲಿಲ್ಲ, ಆದರೆ ಅವನಿಗೆ ನನ್ನ ಪರಿಚಯ ಇತ್ತು. ಈ ಹಿಂದೆ ಬಂದ ಪ್ರಪೋಸಲ್‌ ಕುರಿತು ಹಲವು ನಕಾರಾತ್ಮಕ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ ಆ ಸಂಬಂಧವನ್ನು ತಳ್ಳಿಹಾಕಿದ್ದೆ ಎಂದು ಹೇಳಿದ್ದಾರೆ.

ವೇಣು ಶೆಟ್ಟಿ ಸುದೀಪ್ ಕುಟುಂಬದ ಮೇಲೆ ಪ್ರಭಾವ ಬೀರಿದ್ದು, ಸುದೀಪ್ ತಂದೆಗೆ ಹಲವು ಬಾರಿ ಕರೆ ಮಾಡಿದ್ದಾನೆ. ಈ ಕಾರಣಕ್ಕೂ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆ, ಸುದೀಪ್ ಕುಟುಂಬದವರು ಹಾಗೂ ವೇಣು ಶೆಟ್ಟಿ ವಿರುದ್ಧ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಸೌಮ್ಯಾ ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News