ಬೆಂಗಳೂರು: ಲಗ್ಗೆರೆ ಮೇನ್‌ರೋಡ್‌ನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಅರಸೀಕೆರೆಯ ರಾಮಚಂದ್ರಪ್ಪ ಅವರ ಪುತ್ರ ನಾಗರಾಜು, 58 ಎಂದು ಗುರುತಿಸಲಾಗಿದೆ.
ನಾಗರಾಜು ಅವರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಕಳೆದ ಹಲವು ವರ್ಷಗಳಿಂದ ಲಗ್ಗೆರೆ ಮೇನ್‌ರೋಡ್ ಪ್ರದೇಶದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ನಾಗರಾಜು ಅವರು ಜೆಡಿಎಸ್ ಮುಖಂಡ ಅಂದಾನಪ್ಪ ಅವರಿಗೆ ಸೇರಿದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅವರ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದ ದಿನ ಬೆಳಗ್ಗೆ ಸುಮಾರು 6 ಗಂಟೆಗೆ ಅಂದಾನಪ್ಪ ಅವರ ಪುತ್ರ ಶ್ರೀಧರ್ ಅವರು ನಾಗರಾಜು ಅವರನ್ನು ನೋಡಿದ್ದರು ಎನ್ನಲಾಗಿದೆ. ಬಳಿಕ ಬೆಳಗ್ಗೆ ಸುಮಾರು 6.30ಕ್ಕೆ ಶಾಲಾ ಬಸ್ ಚಾಲಕ ಪ್ರದೀಪ್ ಕೂಡ ಅವರನ್ನು ನೋಡಿದ್ದಾರೆ ಎಂದು ತಿಳಿದುಬಂದಿದೆ.
ನಂತರ ಅಂದಾನಪ್ಪ ಬಿಲ್ಡಿಂಗ್‌ನಲ್ಲಿರುವ ಎಸ್‌ಬಿಐ ಎಟಿಎಂ ಸಮೀಪದ ಸ್ಟಾರ್‌ಫ್ರೂಟ್ ಮರಕ್ಕೆ ಶಾಲಿನಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ನಾಗರಾಜು ಅವರ ಮೃತದೇಹ ಪತ್ತೆಯಾಗಿದೆ.
ನಾಗರಾಜು ಅವರಿಗೆ ಮೂರು ಮದುವೆಯಾಗಿದ್ದವು ಎನ್ನಲಾಗಿದೆ. ಮೊದಲ ಪತ್ನಿ ಪಾರ್ವತಮ್ಮ ಅವರೊಂದಿಗೆ ಸುಮಾರು 45 ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡನೇ ಮದುವೆಯಾದ ಬಳಿಕ ಕಳೆದ ಸುಮಾರು 30 ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೊದಲ ಪತ್ನಿಗೆ ರೂಪಾ ಮತ್ತು ದೀಪಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಎರಡನೇ ಪತ್ನಿ ಹೇಮಲತಾ ಅವರಿಗೆ ಮಕ್ಕಳಿಲ್ಲ. ಮೂರನೇ ಪತ್ನಿ ಶೋಭಾ ಅವರಿಗೆ ದೀಪು ಮತ್ತು ರಾಜಲಕ್ಷ್ಮಿ ಎಂಬ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ದಾಖಲಿಸಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಮೃತ ನಾಗರಾಜು ಅವರ ಸ್ವಂತ ಊರು ಹಾಸನ ಜಿಲ್ಲೆಯ ಅರಸೀಕೆರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದು ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಕಿರುಕುಳದ ಆರೋಪ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

