ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ರಾಜ್ಯಾದ್ಯಂತ 'ಎ ಖಾತೆ' ಯೋಜನೆ ವಿಸ್ತರಣೆ ಸೇರಿದಂತೆ ಹಲವು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಡಿಕೆಶಿ, ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಘೋಷಿಸಿದರು. ಇದು ಬೇರೆ ಊರುಗಳಿಗೆ ತೆರಳಿ ಶಿಕ್ಷಣ ಪಡೆಯುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ದೊಡ್ಡ ನೆರವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರಿಗೆ ಸೀಮಿತವಾಗಿದ್ದ 'ಬಿ ಖಾತಾ'ದಿಂದ 'ಎ ಖಾತಾ'ಗೆ ಪರಿವರ್ತನೆ ಮಾಡುವ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಅವರು ತಿಳಿಸಿದರು. ಜನರಿಗೆ ಆಡಳಿತಾತ್ಮಕ ಅನುಕೂಲತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಸಿಎಂ ಡಿಕೆಶಿ ಮಾತನಾಡಿ, "ಇದು ಶುಭ ಗಳಿಗೆ, ಶುಭ ಮುಹೂರ್ತ. ಸಂಜೆ 4.15ಕ್ಕೆ ಹೊಸ ಕೆಲಸ ಆರಂಭವಾಗಿದೆ. ಇವತ್ತು ಹೊಸ ದಿನ, ಹೊಸ ಅವಕಾಶಗಳ ಆರಂಭ" ಎಂದು ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ನನ್ನ ಮೇಲೆ ಜನ ಅಪಾರ ವಿಶ್ವಾಸ ಇಟ್ಟಿದ್ದಾರೆ. ಹಿಂದೆ ಟೀಕೆಗಳು ಬಂದರೂ ನಾನು ನನ್ನ ರಾಜಕೀಯ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸುತ್ತೇನೆ. ತಿಹಾರ್ ಜೈಲಿಗೂ ಹೋಗಿ ಬಂದ ಅನುಭವವಿದೆ ಎಂದು ಹೇಳಿದ ಅವರು, ಎಲ್ಲ ಸವಾಲುಗಳನ್ನೂ ಎದುರಿಸಿದ್ದೇನೆ ಎಂದರು.
ಮುಂದೆ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ವೈಯಕ್ತಿಕವಾಗಿರುವುದಿಲ್ಲ, ಅದು ಸಂಪೂರ್ಣ ಕ್ಯಾಬಿನೆಟ್‌ನ ಕಲೆಕ್ಟಿವ್ ನಿರ್ಧಾರವಾಗಿರುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು. "ನಮ್ಮ ಸಂಪುಟ ಸರ್ವ ಜನಾಂಗದ ಶಾಂತಿಯ ತೋಟದಂತೆ ಕಾರ್ಯನಿರ್ವಹಿಸುತ್ತದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

