ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಂತಿಮ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಸೋಮವಾರ ಸಂಜೆ ನೂತನ ಸಚಿವರ ಪ್ರಮಾಣವಚನ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ.
ಗುರುವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಈ ವೇಳೆ ಸಂಪುಟ ವಿಸ್ತರಣೆಯ ಕುರಿತು ಅಂತಿಮ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಸೋಮವಾರ ಸಂಜೆ 5 ಗಂಟೆಗೆ ವಿಧಾನಸೌಧದ ಗ್ಲಾಸ್ ಹೌಸ್‌ನಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ. ಒಟ್ಟು ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಭರ್ತಿ ಮಾಡುವ ನಿರೀಕ್ಷೆಯಿದೆ. ಉಳಿದ ಎರಡು ಸ್ಥಾನಗಳನ್ನು ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದೊಳಗಿನ ಸಮತೋಲನಕ್ಕಾಗಿ ಖಾಲಿ ಉಳಿಸುವ ಸಾಧ್ಯತೆ ಇದೆ.
ಇದನ್ನು ಓದಿ : ಬಳ್ಳಾರಿಯಲ್ಲಿ ಭೀಕರ ಘಟನೆ: ಪತ್ನಿ, 7 ತಿಂಗಳ ಕಂದಮ್ಮನನ್ನು ಕೊಂದ ಪಾಪಿ ತಂದೆ !
ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಇಬ್ಬರು ಮಹಿಳಾ ಶಾಸಕರಿಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ . ಆದರೆ ಸಚಿವರಾಗುವವರ ಅಂತಿಮ ಪಟ್ಟಿಯನ್ನು ಪ್ರಮಾಣವಚನದವರೆಗೂ ರಹಸ್ಯವಾಗಿಡಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ.
ಸಭೆಯ ಬಳಿಕ ಮಾತನಾಡಿದ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, "ಸಚಿವ ಸಂಪುಟ ವಿಸ್ತರಣೆಯ ದಿನಾಂಕವನ್ನು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ" ಎಂದು ಹೇಳಿದರು. ಸಚಿವರ ಹೆಸರುಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಂತಿಮ ಪಟ್ಟಿಯೊಂದಿಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾದ ಬಳಿಕ ಭಾನುವಾರ ಅಂತಿಮ ಪಟ್ಟಿಯನ್ನು ರಾಜ್ಯ ನಾಯಕರಿಗೆ ಕಳುಹಿಸುವ ಸಾಧ್ಯತೆ ಇದೆ.
ಈ ನಡುವೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸುವ ವಿಚಾರವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಕೂಡ ಸೋಮವಾರ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ಕಾವೇರಿವಿವಾದದನಡುವೆಸಂಪುಟವಿಸ್ತರಣೆ
ಇನ್ನೊಂದೆಡೆ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಮಾತುಕತೆ ನಡೆಸಬೇಕಿತ್ತು. ಆದರೆ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಸಭೆ ಅನಿಶ್ಚಿತತೆಯಲ್ಲಿದೆ.
ಅಗತ್ಯವಿದ್ದರೆ ಉಭಯ ಮುಖ್ಯಮಂತ್ರಿಗಳು ವರ್ಚುವಲ್ ಮೂಲಕ ಸಭೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.
ಈ ನಡುವೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದನ್ನು ಬಿಜೆಪಿ ಟೀಕಿಸಿದ್ದು, "ಕಾವೇರಿ ಸೇರಿದಂತೆ ರಾಜ್ಯದ ಪ್ರಮುಖ ಸಮಸ್ಯೆಗಳನ್ನು ಬದಿಗೊತ್ತಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ರಾಜಕೀಯ ಚರ್ಚೆಯಲ್ಲಿ ತೊಡಗಿದ್ದಾರೆ" ಎಂದು ಆರೋಪಿಸಿದೆ.
ರಾಹುಲ್ ಗಾಂಧಿ ಅವರ ಮಧ್ಯಪ್ರವೇಶದ ಬಳಿಕ ಸಂಪುಟ ವಿಸ್ತರಣೆಯ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿರುವ ರಾಹುಲ್ ಗಾಂಧಿ, ಸಂಪುಟ ರಚನೆ ಕುರಿತು ಒಮ್ಮತಕ್ಕೆ ಬರುವಂತೆ ಸೂಚಿಸಿದ್ದಾರೆ .
ಈಗ ಎಲ್ಲರ ಗಮನ ಸೋಮವಾರದ ಪ್ರಮಾಣವಚನ ಸಮಾರಂಭದತ್ತ ನೆಟ್ಟಿದ್ದು, ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಮುಂದುವರಿದಿದೆ.

