ಆಗಸ್ಟ್ ಅಂತ್ಯದಲ್ಲಿ ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಬಾಕ್ಸ್ ಆಫೀಸ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಆಗಸ್ಟ್ 26ರಂದು ತೆರೆಗೆ ಬರುತ್ತಿದ್ದರೆ, ಅದರ ಕೇವಲ ಎರಡು ದಿನಗಳ ಬಳಿಕ ಆಗಸ್ಟ್ 28ರಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಬಿಡುಗಡೆಗೆ ಸಜ್ಜಾಗಿದೆ.
ಎರಡು ದೊಡ್ಡ ಸಿನಿಮಾಗಳ ಮುಖಾಮುಖಿ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಆದರೆ ಬಿಡುಗಡೆಯ ಮುನ್ನವೇ 'ಈಥಾ' ಚಿತ್ರ ಟೈಟಲ್ ವಿವಾದದ ಸುಳಿಗೆ ಸಿಲುಕಿತ್ತು. ಮಹಾರಾಷ್ಟ್ರದ ಖ್ಯಾತ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಸಿನಿಮಾ ಆಗಿದ್ದರೂ, ಅವರ ಹೆಸರಿನ ಬದಲಿಗೆ 'ಈಥಾ' ಎಂಬ ಶೀರ್ಷಿಕೆ ಬಳಸಿರುವುದಕ್ಕೆ ಎನ್‌ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಜೊತೆಗೆ ವಿಠಾಬಾಯಿ ಕುಟುಂಬವೂ ಶೀರ್ಷಿಕೆಗೆ ವಿರೋಧ ವ್ಯಕ್ತಪಡಿಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ಈ ಎಲ್ಲಾ ಊಹಾಪೋಹಗಳಿಗೆ ಇದೀಗ ವಿಠಾಬಾಯಿ ಅವರ ಹಿರಿಯ ಪುತ್ರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ತಮಾಷಾ ಕಲಾವಿದೆ ಮಂಗಳಾ ಬನ್ಸೋಡೆ ಕರಾವಡಿಕರ್ ತೆರೆ ಎಳೆದಿದ್ದಾರೆ. 'ನಮ್ಮ ಕುಟುಂಬಕ್ಕೆ ಚಿತ್ರದ ಶೀರ್ಷಿಕೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ತಾಯಿಯನ್ನು ಪ್ರೀತಿಯಿಂದ "ಈಥಾ" ಎಂದೇ ಕರೆಯಲಾಗುತ್ತಿತ್ತು. ಆದ್ದರಿಂದ ಈ ಹೆಸರು ಸೂಕ್ತವಾಗಿದೆ. ಅವರ ಕಲಾ ಸೇವೆ ಸಿನಿಮಾ ಮೂಲಕ ಜಗತ್ತಿಗೆ ತಲುಪುತ್ತಿರುವುದು ನಮಗೆ ಸಂತಸದ ವಿಚಾರ' ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಸಿನಿಮಾ ಆರಂಭಕ್ಕೂ ಮುನ್ನವೇ ಕುಟುಂಬದವರೊಂದಿಗೆ ಚರ್ಚಿಸಿ ಈ ಶೀರ್ಷಿಕೆಯನ್ನು ಅಂತಿಮಗೊಳಿಸಿದ್ದರು ಎನ್ನಲಾಗಿದೆ. ಇದೀಗ ಕುಟುಂಬವೇ ಅಧಿಕೃತವಾಗಿ ಸ್ಪಷ್ಟನೆ ನೀಡಿರುವುದರಿಂದ ಟೈಟಲ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿದೆ.
ಇದರೊಂದಿಗೆ 'ಈಥಾ' ಯಾವುದೇ ಅಡೆತಡೆ ಇಲ್ಲದೆ ಬಿಡುಗಡೆಯತ್ತ ಹೆಜ್ಜೆ ಇಟ್ಟಿದೆ. ಒಂದು ಕಡೆ ಯಶ್ ಅವರ 'ಟಾಕ್ಸಿಕ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಓಪನಿಂಗ್ ಗುರಿಯಾಗಿಸಿಕೊಂಡಿದ್ದರೆ, ಮತ್ತೊಂದೆಡೆ ಶ್ರದ್ಧಾ ಕಪೂರ್ ಅವರ 'ಈಥಾ' ಎರಡು ದಿನಗಳ ಅಂತರದಲ್ಲಿ ಬಾಕ್ಸ್ ಆಫೀಸ್ ಅಖಾಡಕ್ಕಿಳಿಯುತ್ತಿದೆ. ಆಗಸ್ಟ್ ಅಂತ್ಯದ ಈ ಸ್ಟಾರ್ ವಾರ್‌ನಲ್ಲಿ ಅಂತಿಮವಾಗಿ ಮೇಲುಗೈ ಯಾರಿಗೆ ಸಿಗಲಿದೆ ಎಂಬುದೇ ಈಗ ಸಿನಿ ವಲಯದ ಬಹುದೊಡ್ಡ ಕುತೂಹಲವಾಗಿದೆ.

