ರಾಜ್ಯದಲ್ಲಿ ಉಪಚುನಾವಣಾ ಅಖಾಡ ರಂಗೇರಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಆರ್. ಆರ್ ನಗರ ಉಪಚುನಾವಣಾ ಕಣವನ್ನು ಗೆಲ್ಲಲೇ ಬೇಕು ಎನ್ನುವ ಹಠದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಘಟಾನುಘಟಿ ನಾಯಕರ ಮೂಲಕ ಪ್ರಚಾರ ನಡೆಸುತ್ತಿದೆ.
ಇವೆಲ್ಲದರ ನಡುವೆ ಕಾಂಗ್ರೆಸ್ ನಾಯಕರ ಆರೋಪದಿಂದ ಬೇಸತ್ತ ಬಿಜೆಪಿ ಆಭ್ಯರ್ಥಿ ಮುನಿರತ್ನ ಕಣ್ಣೀ ರು ಹಾಕಿದ್ದಾರೆ. ಮುನಿರತ್ನ ಕಣ್ಣೀರಿಗೆ ಕಾರಣವಾದ ಆರೋಪವೇನು..? ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಗೆಲ್ಲಿಸಲೇ ಬೇಕು ಎಂದು ಪಣ ತೊಟ್ಟಿರುವ ಡಿ.ಕೆ ಬ್ರದರ್ಸ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಆರ್.ಆರ್ ನಗರ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಪ್ರಚಾರದ ಭರಾಟೆಯಲ್ಲಿ ಮುನಿರತ್ನ ತಾಯಿಯನ್ನು ಎಳೆತಂದಿರುವುದಕ್ಕೆ ಮುನಿರತ್ನ ಬೇಸರದಿಂದ ಕಣ್ಣೀರು ಹಾಕಿದ್ದಾರೆ.
ಈ ಹಿಂದೆ ಮುನಿರತ್ನ ಕಾಂಗ್ರೆಸ್ನಲ್ಲಿದ್ದಾಗ ನನ್ನ ತಾಯಿ ಕಾಂಗ್ರೆಸ್ನಲ್ಲಿದ್ದವರು, ನನ್ನ ರಕ್ತ ಕಾಂಗ್ರೆಸ್ ಎಂದು ಹೇಳಿದವರು ಈಗ ಬಿಜೆಪಿಯಲ್ಲಿದ್ದಾರೆ ಎಂದು ಡಿ.ಕೆ ಸುರೇಶ್ ಪ್ರಚಾರದ ವೇಳೆ ಹೇಳಿದ್ರು. ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ನನ್ನ ತಾಯಿ ಮೃತರಾಗಿ 25 ವರ್ಷಗಳೇ ಕಳೆದಿದೆ, ನೀವು ಏನೇ ಆರೋಪ ಮಾಡುವುದಿದ್ದರೂ ನನ್ನ ಮೇಲೆ ಮಾಡಿ ಸುಖಾ ಸುಮ್ಮನೆ ನನ್ನ ತಾಯಿಯನ್ನು ಎಳೆದು ತರಬೇಡಿ ಎಂದು ಕಣ್ಣೀರು ಹಾಕಿದ್ದಾರೆ.
ಇನ್ನು ಮುನಿರತ್ನ ಕಣ್ಣೀರಿಗೆ ತಿರುಗೇಟು ನೀಡಿರುವ ಸಂಸದ ಡಿ.ಕೆ ಸುರೇಶ್ ಮುನಿರತ್ನ ಸಿನಿಮಾದವರು, ಅವರು ಸಿನಿಮಾ ನಿರ್ಮಾಪಕರು, ಅವರಿಗೆ ಕಣ್ಣೀರು ಹಾಕೋದು ಗೊತ್ತು ಕಣ್ಣೀರು ಹಾಕಿಸೋದು ಗೊತ್ತು ಎಂದು ಟಾಂಗ್ ನೀಡಿದ್ದಾರೆ. ಒಟ್ಟಿನಲ್ಲಿ ಆರ್.ಆರ್ ನಗರ ಉಪಚುನಾವಣಾ ಅಖಾಡ ತೀವ್ರ ಕುತೂಹಲ ಕೆರಳಿಸಿದ್ದು ಯಾರು ಗೆಲ್ಲುತ್ತಾರೋ ಎಂದು ಕಾದು ನೋಡಬೇಕಾಗಿದೆ.

