Dailyhunt
ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ :ಸಚಿವ ಬಸವರಾಜ ಬೊಮ್ಮಾಯಿ

ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ :ಸಚಿವ ಬಸವರಾಜ ಬೊಮ್ಮಾಯಿ

AIN Kannada 5 years ago

ಬೆಂಗಳೂರು : ಕೇವಲ ರಾಜ್ಯಪಾಲರು ಸಭೆ ಕರೆದ ಮಾತ್ರಕ್ಕೆ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿರುವಾಗ ರಾಜ್ಯಪಾಲರ ಆಳ್ವಿಕೆ ಜಾರಿಯಾದಂತಿದೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಅಸಮಂಜಸವಾಗಿದ್ದು, ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಿಗೆ ಇದು ಶೋಭೆಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಎಲ್ಲಾ ರಾಜ್ಯಗಳ ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದಾರೆ. ನೀವು ಕೂಡ ಕೊರೊನಾದಂತಹ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಜೊತೆಗೆ ಪ್ರತಿಪಕ್ಷಗಳ ಜೊತೆ ಮಾತನಾಡಿ ಎಲ್ಲರೂ ಒಟ್ಟಾಗಿ ಕೊರೊನಾವನ್ನು ಎದುರಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸಲಹೆಯಂತೆ ಎಲ್ಲಾ ರಾಜ್ಯಗಳ ರಾಜ್ಯಪಾಲರು ಆಯಾ ರಾಜ್ಯಗಳಲ್ಲಿ ಸಭೆ ಕರೆಯುತ್ತಿದ್ದು ಅದರಂತೆ ನಮ್ಮಲ್ಲಿಯೂ ರಾಜ್ಯಪಾಲ ವಜುಭಾಯ್ ವಾಲಾ ಸಭೆ ಕರೆದಿದ್ದಾರೆ.

ಅಷ್ಟಕ್ಕೇ ಒಂದು ರೀತಿಯಲ್ಲಿ ರಾಜ್ಯಪಾಲರ ಆಡಳಿತ ಬರುವ ರೀತಿಯಲ್ಲಿ ಇದೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಹಾಗಾದರೆ ರಾಜಸ್ಥಾನದಲ್ಲಿಯೂ ರಾಜ್ಯಪಾಲರು ಸಭೆ ಕರೆದಿದ್ದಾರೆ. ಅಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಹಾಗಂತ ಅಲ್ಲಿ ರಾಜ್ಯಪಾಲರ ಆಳ್ವಿಕೆ ಬರುತ್ತದೆ ಎಂದು ಹೇಳಲು ಸಾಧ್ಯವೇ?. ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಇದೆ ಅಲ್ಲಿಯೂ ರಾಜ್ಯಪಾಲರು ಸಭೆ ಕರೆದಿದ್ದಾರೆ. ಹಾಗಂತ ರಾಷ್ಟ್ರಪತಿ ಆಳ್ವಿಕೆ ರಾಜ್ಯಪಾಲರ ಆಳ್ವಿಕೆ ಬರಲಿದೆ ಎಂದು ಹೇಳಲು ಸಾಧ್ಯವೇ?.

ಪ್ರತಿಯೊಂದು ವಿಚಾರದಲ್ಲಿಯೂ ಹುಳುಕು ಹುಡುಕುವುದು, ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಎಲ್ಲರ ಲಕ್ಷ್ಯ ಕೊರೊನಾ ಎದುರಿಸುವ ಸಂಬಂಧ ಇರಬೇಕೆ ಹೊರತು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು. ಇದನ್ನು ಡಿ ಕೆ ಶಿವಕುಮಾರ್ ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

Share

Continue Reading

Dailyhunt
Disclaimer: This content has not been generated, created or edited by Dailyhunt. Publisher: AIN Live News