ಅಂತಾರಾಷ್ಟ್ರೀಯ
ಟ್ರಂಪ್ ಸರ್ಕಾರದ '2020ರ ಪೌರತ್ವ ಗುರುತು' ಪ್ರಕ್ರಿಯೆಗೆ ಅಂತ್ಯ ಹಾಡಿದ ಬೈಡನ್

ವಾಷಿಂಗ್ಟನ್ : ಟ್ರಂಪ್ ಸರ್ಕಾರದ ಆಳ್ವಿಕೆಯ ಸಮಯದಲ್ಲಿದ್ದ ಕೆಲ ಯೋಜನೆಗಳನ್ನು ಬೈಡನ್ ಸರ್ಕಾರ ರದ್ದು ಮಾಡುತ್ತಿದೆ. ಇದೀಗ ಗಣತಿ ವಿಚಾರದಲ್ಲೂ ರದ್ಧು ಮಾಡಲಾಗಿದೆ.2020ರ ಗಣತಿಯ ಅಂಕಿ ಅಂಶಗಳನ್ನು ಆಧರಿಸಿ ಜನರ ಪೌರತ್ವ ಹಾಗೂ ವಯಸ್ಸು ಕುರಿತ ದತ್ತಾಂಶ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಅಮೆರಿಕದ ಜನಗಣತಿ ಸಂಸ್ಥೆ ಕೈಬಿಟ್ಟಿದೆ. ಈ ಮೂಲಕ ಟ್ರಂಪ್ ಆಳ್ವಿಕೆ ಸಂದರ್ಭದಲ್ಲಿದ್ದ ಗಣತಿ ನಿರ್ಧಾರವನ್ನು ಬೈಡನ್ ಆಡಳಿತವು ಹಿಂದೆ ಪಡೆದಿದೆ.
ಈ ಕುರಿತ ಆದೇಶಕ್ಕೆ ಜೋ ಬೈಡನ್ ಈಗಾಗಲೇ ಸಹಿ ಹಾಕಿದ್ದಾರೆ. ಈ ಮೂಲಕ ಜನಗಣತಿ ಸಂಸ್ಥೆಯು ಪೌರತ್ವ ಮತ್ತು ವಯಸ್ಸು ಆಧರಿಸಿದ ದತ್ತಾಂಶ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. 2020ರ ಗಣತಿಗೆ ಸಂಬಂಧಿಸಿದಂತೆ ಟ್ರಂಪ್ ಅವರ ಎರಡು ನಿರ್ದೇಶನಗಳನ್ನು ಕೈಬಿಡಲು ನಿರ್ಧರಿಸಲಾಗಿದೆ.
ಮೊದಲನೆಯದು ಅಮೆರಿಕದ ಪ್ರತಿ ನಾಗರಿಕರ ಪೌರತ್ವವನ್ನು ದಾಖಲೆಗಳನ್ನು ಆಧರಿಸಿ ಗ್ರಹಿಸುವುದು. ಎರಡನೆಯದು ಪೌರತ್ವವಿಲ್ಲದ, ನಿಯಮಬಾಹಿರವಾಗಿ ಇರುವವರನ್ನು ಪ್ರತ್ಯೇಕಗೊಳಿಸುವುದು ಎಂದು ಸಂಸ್ಥೆಯು ತಿಳಿಸಿತ್ತು. ಇದಕ್ಕೆ ಕಡಿವಾಣ ಬಿದ್ದಿದೆ.
ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಅವರು, ಬ್ಲಾಕ್ ಹಂತದ ಪೌರತ್ವ ಅಂಕಿ-ಅಂಶ ಒದಗಿಸಬೇಕು ಎಂದು 2018ರಲ್ಲಿ ಆದೇಶಿಸಿದ್ದರು. ಬೈಡನ್ ಅವರ ಆದೇಶದ ನಂತರ ಜನಗಣತಿ ಸಂಸ್ಥೆಯು, ಗಣತಿಗೆ ಸಂಬಂಧಿತ ಯಾವುದೇ ದಾಖಲೆ ಭೂಪ್ರದೇಶ ಆಧರಿಸಿ ವಲಸಿಗರು ಅಥವಾ ಪೌರತ್ವ ಕುರಿತ ಮಾಹಿತಿ ಹೊಂದಿರುವುದಿಲ್ಲ ಎಂದಿದೆ.