ಮುಖಪುಟ
ಅಣ್ಣಾವ್ರ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದ ಮೈಕ್ ಚಂದ್ರು ಇನ್ನಿಲ್ಲ
ಮೈಸೂರು: ʻಮಾನ್ಯರೇ ಮತ್ತು ಮಹಿಳೆಯರೇ.ʼ ಎಂದು ಕೂಗುತ್ತಾ ಬೀದಿ ಬೀದಿಯಲ್ಲಿ ಸಾಗುವ ಧ್ವನಿ ನಿಂತುಹೋಗಿದೆ. ಮೈಸೂರಿನ ಜನತೆಗೆ ಮೈಕ್ ಚಂದ್ರು ಎಂದೇ ಚಿರಪರಿಚಿತರಾದ ಎನ್.ಚಂದ್ರಶೇಖರ್ (69) ಭಾನುವಾರ ಬೆಳಿಗ್ಗೆ ನಿಧನರಾದರು.
ʻಮಾನ್ಯರೇ ಮತ್ತು ಮಹಿಳೆಯರೇ.ʼ ಎಂದು ಕೂಗುತ್ತಾ ಆಟೋ ಬೀದಿ ಬೀದಿಯಲ್ಲಿ ಸಾಗುತ್ತಿದ್ದರೆ, ಆ ಧ್ವನಿ ಕೇಳಿದ ಕೂಡಲೇ ʻಮೈಕ್ ಚಂದ್ರು ಅಂಕಲ್ ಬಂದ್ರುʼ ಅಂತ ಮಕ್ಕಳು ಗುರುತಿಸುತ್ತಿದ್ದರು. ಆಟೋದಲ್ಲಿ ಸ್ಪೀಕರ್ ಇಟ್ಟುಕೊಂಡು ಮೈಕ್ ಚಂದ್ರು ಸಾರುತ್ತಾ ಮುಂದೆ ಸಾಗಿದರೆ, ಮನೆಯಿಂದ ಎಲ್ಲರೂ ಆಚೆ ಬಂದು ಮೈಕ್ ಚಂದ್ರು ನೀಡುವ ಪಾಂಪ್ಲೆಟ್ ಪಡೆದು ತೆರಳುತ್ತಿದ್ದರು.
ತಮ್ಮ ಶುಶ್ರಾವ್ಯ ಕಂಠದಿಂದಲೇ ಮೈಕ್ ಚಂದ್ರು ನಗರದ ಜನತೆಗೆ ಮಾಹಿತಿ, ಸಂದೇಶಗಳನ್ನು ಒದಗಿಸುತ್ತಿದ್ದರು.
ತಿ.ನರಸೀಪುರ ಮೂಲದವರಾದ ಚಂದ್ರಶೇಖರ್ ಅವರು ಎನ್.ನಾರಾಯಣ ರಾವ್, ವಿಶಾಲಾಕ್ಷಮ್ಮ ದಂಪತಿ ಪುತ್ರರಾಗಿ ಜನಿಸಿದರು. ಡಿ.ಬನುಮಯ್ಯ ಕಾಲೇಜಿನಲ್ಲಿ ಪದವಿ ಪಡೆದರು. ಶಾಲೆಯಲ್ಲಿ ʻಭಕ್ತಪ್ರಹ್ಲಾದʼ ನಾಟಕದಲ್ಲಿ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದರು. ಅಲ್ಲಿಂದಾಚೆಗೆ ರಂಗಭೂಮಿ ಕಡೆಗೆ ಆಸಕ್ತಿ ಬೆಳೆಸಿಕೊಂಡರು. ʻಸದಾರಮೆʼ ನಾಟಕದ ಪ್ರಚಾರಕ್ಕಾಗಿ ಮೈಕ್ ಚಂದ್ರು ಅವರನ್ನು ನಿಯೋಜಿಸಿಕೊಳ್ಳಲಾಗಿತ್ತು. ಹೀಗೆ ಅವರು ಸಾರ್ವಜನಿಕ ಪ್ರಚಾರ ಜೀವನದಲ್ಲಿ ತುಂಬಾ ಚಿರಪರಿಚಿತರಾದರು.
ಅಣ್ಣಾವ್ರ ಕಾರ್ಯಕ್ರಮ ನಿರೂಪಣೆ
1980ರಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಡಾ. ರಾಜ್‌ಕುಮಾರ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದು ಮೈಕ್ ಚಂದ್ರು ಅವರ ಜೀವನದ ಅವಿಸ್ಮರಣೀಯ ದಿನ. ಅಣ್ಣಾವ್ರ ಅಪ್ಪಟ ಅಭಿಮಾನಿ ಮೈಕ್ ಚಂದ್ರು. ಅವರೇ ಇರುವ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವುದು ಸೌಭಾಗ್ಯವೇ ಸರಿ ಎಂದು ಈ ಹಿಂದೆ ಸ್ಮರಿಸಿದ್ದರು. ಸಾಮಾನ್ಯವಾಗಿ ಎಸ್.ಕೆ.ಭಗವಾನ್ ಅವರು ಡಾ. ರಾಜ್‌ಕುಮಾರ್ ಅವರ ಯಾವುದೇ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ. ಆ ಅವಕಾಶ ಮೈಕ್ ಚಂದ್ರು ಅವರಿಗೆ ಲಭಿಸಿ, ಬಹಳ ಅಚ್ಚಕಟ್ಟಾಗಿ ನಿರೂಪಣೆ ಜವಾಬ್ದಾರಿಯನ್ನು ನಿರ್ವಹಿಸಿದ್ದರಂತೆ.