Dailyhunt Logo
  • Light mode
    Follow system
    Dark mode
    • Play Story
    • App Story

ಹೆದ್ದಾರಿಯಲ್ಲಿ ಮನಸ್ಸಿಗೆ ಮುದ ನೀಡುತ್ತಿರುವ ಕೆಂಬಣ್ಣದ ಹೂಗಳ ಚಿತ್ತಾರ!

ಭೇರ್ಯ ಮಹೇಶ್

ಕೆ.ಆರ್.ನಗರದಿಂದ ಭೇರ್ಯ ಗ್ರಾಮದವರೆಗೆ ಅಲ್ಲಲ್ಲಿ ಮೇ ಫ್ಲವರ್ ಮರಗಳ ಆಕರ್ಷಣೆ

ಕೆ.ಆರ್.ನಗರ: ಬೇಸಿಗೆಯ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಮೋಡಗಳು… ಭೂಮಿಗೆ ತಂಪೆರೆಯುವ ಮಳೆ ಹನಿ… ಇವೆಲ್ಲದಕ್ಕೂ ಜತೆಯಾಗಿ ರಸ್ತೆಯಲ್ಲಿ ಫಳಫಳ ಹೊಳೆಯುವ ಕೆಂಪನೆಯ ಹೂಗಳು…

ಹೌದು, ಕೆ.ಆರ್.ನಗರದಿಂದ ಭೇರ್ಯ ಗ್ರಾಮದವರೆಗೆ ಹಾಸನ- ಮೈಸೂರು ಹೆದ್ದಾರಿಯಲ್ಲಿರುವ ಚಿಕ್ಕವಡ್ಡರಗುಡಿ, ಹೊಸ ಅಗ್ರಹಾರ, ರೈಲ್ವೆ ನಿಲ್ದಾಣ ಹಾಗೂ ಭೇರ್ಯ ಗ್ರಾಮದ ಆಸ್ಪತ್ರೆ ಆವರಣ ಮುಂತಾದ ಕಡೆಗಳಲ್ಲಿ ಮೇ ಫ್ಲವರ್ ಮರಗಳು ಕೆಂಬಣ್ಣದ ಹೂಗಳಿಂದ ತುಂಬಿ ಎಲ್ಲರನ್ನೂ ಆಕರ್ಷಿಸುತ್ತಿವೆ.

ಬಣ್ಣ ಬಣ್ಣದ ಅಪರೂಪದ ಹೂವುಗಳು ಅರಳಿ ನಿಲ್ಲುವ ಕಾಲವಿದು. ಅದರಲ್ಲೂ ಈ ತಿಂಗಳಲ್ಲಿ ಅರಳುವ ಮೇ ಫ್ಲವರ್ ಎಲ್ಲರ ಕಣ್ಮನ ಸೆಳೆಯುತ್ತವೆ.

ಲಿಲ್ಲಿ ಹೂ: ಇದೇ ರೀತಿ ಈ ತಿಂಗಳಲ್ಲಷ್ಟೇ ಬಿಡುವ ಮತ್ತೊಂದು ಹೂವು 'ಬಾಲ್ ಲಿಲ್ಲಿ'. ರಾಕೆಟ್‌ನಂತೆ ಚಿಮ್ಮಲು ತಯಾರಾದಂತೆ ಭಾಸವಾಗುವ ಕೆಂಪು ಬಣ್ಣದ ಈ ಹೂವುಗಳು ಕಂಗೊಳಿಸುತ್ತಿವೆ. ಜತೆಗೆ ತರಹೇವಾರಿ ಸಾಮಾನ್ಯಲಿಲ್ಲಿ ಹೂಗಳೂ ಆಕರ್ಷಿಸುತ್ತಿವೆ. ಮನೆಗಳ ಮುಂದೆ ಅಲಂಕಾರಕ್ಕಾಗಿ ಪಾಟ್ ಗಳಲ್ಲಿ ಬೆಳೆಸಿರುವ ಲಿಲ್ಲಿ ಹೂ, ಕಣಿವೆ ಲಿಲ್ಲಿ ಹೂ, ಬಾಲ್ ಲಿಲ್ಲಿ ಹೂಗಳು ಮನಸ್ಸಿಗೆ ಮುದ ನೀಡುತ್ತಿವೆ.

ಮೇ ತಿಂಗಳಲ್ಲಿ ಬಿಡುವ ಇತರ ಹೂಗ ಳೆಂದರೆ ಮೇ ಫ್ಲವರ್ (ಡೆಲೊನಿಕ್ಸ್ ರೆಜಿಯಾ), ಕ್ಯಾಸಿಯಾ ಜವಾನಿಕ, ಲೆಜಿಸ್ತೋ ನಿಯಾ, ಪ್ಲಮೇರಿಯಾ (ದೇವಕಣಿಗಲು), ರೇನ್ ಟ್ರೇ ಮತ್ತು ಕಾಪರ್ ಪಾಡ್ಡ ಎಂಬ ಹಳದಿ ಬಣ್ಣದ ಹೂವುಗಳು ಮೇ ತಿಂಗಳಲ್ಲಿ ಕಾಣ ಸಿಗುತ್ತವೆ. ಈಗಾಗಲೇ ಹಲವೆಡೆ ಹೂವು ಬಿಟ್ಟಿವೆ. ಇವುಗಳಲ್ಲಿ ಕೆಲವು ಹೂವು ಬಿಟ್ಟ ನಂತರ ಎರಡರಿಂದ ಮೂರು ತಿಂಗಳುಗಳ ಕಾಲವೂ ತಮ್ಮ ಸೊಬಗನ್ನು ಬೀರುತ್ತವೆ. ಮರದಲ್ಲಿ ಹೂ ಗೊಂಚಲುಗಳು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂ ಹಾಸಿಗೆಯಂತೆ ಕಂಗೊಳಿಸುತ್ತವೆ.

” ಮೇ ಫ್ಲವರ್‌ಗಳನ್ನು ನಮ್ಮ ಪೂರ್ವಿಕರ ಕಾಲದಲ್ಲಿ ಮದುವೆಸಮಾರಂಭಕ್ಕೆ ಚಪ್ಪರಕ್ಕೆ ಹಾಗೂ ಮಾರಮ್ಮನ ಹಬ್ಬಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಕಾಲ ಬದಲಾದಂತೆ ಈ ಮರದ ಸಂತತಿ ಕಡಿಮೆಯಾಗಿ ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶದ ಪಾರ್ಕ್‌ಗಳಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿವೆ.”

-ಗಂಧನಹಳ್ಳಿ ಹೇಮಂತ್, ಪ್ರಗತಿಪರ ರೈತರು

” ನಾವು ಮಕ್ಕಳಾಗಿದ್ದಾಗ ಗುಲ್‌ಮೊಹರ್ ಕಾಯಿಗಳನ್ನು ಹಿಡಿದು ಕತ್ತಿವರಸೆ ಆಟ ಆಡುತ್ತಿದ್ದವು. ನಿಸರ್ಗ ಪ್ರಿಯರು, ಕವಿಗಳಿಗೆ ಈ ಹೂವು ಪ್ರೇರಣಾಶಕ್ತಿ. ಇನ್ನು ಮಕ್ಕಳಿಗೆ ಕತ್ತಿಕಾಯಿ ಮತ್ತು ಹೂಗಳು ಆಟದ ವಸ್ತು. ಮದುವೆ ಮಾಡುವ ಮಂದಿಗೆ ಚಪ್ಪರಕ್ಕೆ ಅಲಂಕಾರಿಕ ಹೂವು. ಇದು ಗುಲ್ ಮೊಹರ್‌ನ ವೈಶಿಷ್ಟ್ಯತೆ. ದಾರಿಹೋಕರಿಗೆ ನೆರಳು, ದನಗಳಿಗೆ ಇದರ ಎಲೆ ಆಹಾರವಾಗಿದೆ. ರಸ್ತೆ ಬದಿಯಲ್ಲಿ ಈ ರೀತಿಯ ಮರಗಳನ್ನು ನೆಡುವ ಪ್ರವೃತ್ತಿ ಹೆಚ್ಚಾಗಬೇಕು.”

-ಡಾ.ಕೆ.ಆರ್.ಗೌತಮ್, ಮೂಳೆ ತಜ್ಞರು, ಜೀವಾ ಅರ್ಥೋ ಕೇರ್, ಕೆ.ಆರ್.ನಗರ

Dailyhunt
Disclaimer: This content has not been generated, created or edited by Dailyhunt. Publisher: Andolana