Dailyhunt Logo
  • Light mode
    Follow system
    Dark mode
    • Play Story
    • App Story

ಇಂಧನ ಬೆಲೆ ಏರಿಕೆ-ಮೊಸಳೆ ಬಂತು ಮೊಸಳೆ ಕಥೆ!

ರಾಜಾರಾಂ ತಲ್ಲೂರು

ಇಂದು ದೇಶ ಅನುಭವಿಸುತ್ತಿರುವ ತೈಲ ಶಾಕ್‌ಗೆ ಸರ್ಕಾರದ ಅನಧಿಕೃತ ಹಸ್ತಕ್ಷೇಪ ಕಾರಣ

ಸುವ್ಯವಸ್ಥೆಗೆಂದು ರೂಪಿಸಲಾದ ನಿಯಮಗಳನ್ನು, ಆ ನಿಯಮಗಳನ್ನು ರೂಪಿಸಿದವರೇ ರಾಜಕೀಯ ಲಾಭಕ್ಕೆ ಅಥವಾ ಇನ್ಯಾವುದೋ ಸ್ವಾರ್ಥಕ್ಕೆ ಉಲ್ಲಂಸಿದಾಗ ಏನಾಗಬೇಕೋ ಅದು ಆಗಿದೆ-ಇದು ದೇಶದಲ್ಲಿ ಈಗ ಏರುಗತಿಯಲ್ಲಿರುವ ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆಯ ಹಿಂದಿನ ಸರಳ ಸತ್ಯ.

ಖಾಸಗೀಕರಣ ಆದ ಬಳಿಕ, ಸರ್ಕಾರಿ ನಿಯಂತ್ರಣದಲ್ಲಿದ್ದ ಇಂಧನ ಬೆಲೆಗೆ ಡೈನಾಮಿಕ್ ಪ್ರೈಸಿಂಗ್ (ಅರ್ಥಾತ್, ತೈಲಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಮತ್ತು ರೂಪಾಯಿ-ಡಾಲರ್ ವಿನಿಮಯ ದರ ಆಧರಿಸಿ ನಿಗದಿ ಮಾಡಲಾಗುವ ಬೆಲೆ) ಜಾರಿಗೆ ಬಂದದ್ದು, ಕ್ರಮವಾಗಿ ೨೦೧೦ ಜೂನ್ ೨೬ (ಪೆಟ್ರೋಲ್) ಮತ್ತು ೨೦೧೪ ಅಕ್ಟೋಬರ್ ೧೯ (ಡೀಸೆಲ್)ರಂದು. ಆಗ ಪ್ರತೀ ೧೫ ದಿನಗಳಿಗೊಮ್ಮೆ ಈ ಪರಿಷ್ಕರಣೆ ನಡೆಯುತ್ತಿತ್ತು. ೨೦೧೭ ಜೂನ್೧೬ರಂದು ಈ ಪರಿಷ್ಕರಣೆಯನ್ನು ಪ್ರತೀದಿನ ನಡೆಯುವಂತೆ ಬದಲಾಯಿಸಲಾಯಿತು. ಇದನ್ನೆಲ್ಲ ನಿರ್ವಹಿಸುವವರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿ).

ಈ ಮೆಕ್ಯಾನಿಕಲ್ ವ್ಯವಹಾರದಲ್ಲಿ ಸರ್ಕಾರಕ್ಕೆ ಏನೂ ಕೆಲಸ ಇರಬಾರದಿತ್ತು. ಆದರೆ, ಇಲ್ಲಿ ಪದೇಪದೇ ಮೂಗು ತೂರಿಸಿದ ಭಾರತ ಸರ್ಕಾರ, ಆರಂಭದಲ್ಲಿ 'ಮೊಸಳೆ ಮೊಸಳೆ' ಎಂದು ಬೊಬ್ಬೆ ಹೊಡೆದಾಗ ಜನ ಆ ಕಡೆ ಕಾಳಜಿಯಿಂದ ನೋಡಿದ್ದರು. ಆದರೆ ಅಲ್ಲಿ ಮೊಸಳೆ ಇಲ್ಲದಿರುವುದು ಗಮನಕ್ಕೆ ಬಂದದ್ದರಿಂದ ನಿರ್ಲಕ್ಷಿಸಿದ್ದರು. ಈಗ ಮೊಸಳೆ ನಿಜಕ್ಕೂ ಬಂದಿದೆ, ಸರ್ಕಾರ 'ಮೊಸಳೆ ಮೊಸಳೆ' ಎಂದು ಬೊಬ್ಬಿಡುತ್ತಿದ್ದರೆ, ಜನ ನಂಬಲು ತಯಾರಿಲ್ಲ! ಇದನ್ನು ಹೇಗೆಂದು ಸ್ವಲ್ಪ ವಿವರಿಸುವೆ.

೨೦೨೧ರ ಕೊನೆಯ ವೇಳೆಗೆ ಕೋವಿಡ್ ಲಾಕ್‌ಡೌನ್ ಮತ್ತಿತರ ಜಿಯೊಪೊಲಿ ಟಿಕಲ್ ಕಾರಣಗಳಿಗಾಗಿ, ಅಂತಾರಾಷ್ಟ್ರೀಯ ತೈಲ ಬೆಲೆ ಬಹುತೇಕ ದುಪ್ಪಟ್ಟಾಗಿತ್ತು. ಆದರೆ, ಭಾರತದಲ್ಲಿ ಆಡಳಿತ ಪಕ್ಷಕ್ಕೆ ಉತ್ತರಪ್ರದೇಶ ಸೇರಿದಂತೆ ಹಲವು ಚುನಾವಣೆಗಳು, ೨೦೨೪ರ ಮಹಾಚುನಾವಣೆ ಎದುರಿಸಿದ್ದವು. ಆ ಕಾರಣಕ್ಕಾಗಿ ಜನರಿಗೆ ಹೊರೆ ಆಗದಂತೆ, ಇಂಧನ ಬೆಲೆಯ 'ಡೈನಾಮಿಸಂ' ಅನ್ನು ಸರ್ಕಾರ ಅನಧಿಕೃತವಾಗಿ ನಿಲ್ಲಿಸಿತು. ಇದರಿಂದಾಗಿ, ನಷ್ಟಕ್ಕೆ ಬಿದ್ದ ತೈಲ ಕಂಪೆನಿಗಳ ಮೇಲೆ ೧.೯೮ ಲಕ್ಷ ಕೋಟಿ ರೂ.ಗಳ ಹೊರೆ ಬಿದ್ದಿತ್ತು. ಕೋವಿಡ್ ಬಳಿಕ ಅಂತಾರಾಷ್ಟ್ರೀಯ ತೈಲ ದರ ಇಳಿಕೆ ಆದಾಗಲೂ ದೇಶದಲ್ಲಿ 'ಡೈನಾಮಿಕ್ ಪ್ರೆ ಸಿಂಗ್' ಪದ್ಧತಿ ಹಿಂದಿರುಗಲಿಲ್ಲ. ಅದನ್ನು ಸರ್ಕಾರ ತನ್ನ ತೈಲಕಂಪೆನಿಗಳ ನಷ್ಟ ಭರ್ತಿಗೆ ಮತ್ತು ಹೆಚ್ಚುವರಿ ಲಾಭದ ಕಮಿಷನ್‌ಗೆ ಬಳಸಿಕೊಂಡಿತು ಎಂಬ ಆಪಾದನೆಗಳಿವೆ.

ಈ ನಡುವೆ ೨೦೨೨ ಫೆಬ್ರವರಿಯಲ್ಲಿ ಉಕ್ರೇನ್-ರಷ್ಯಾ ಕದನ ಆರಂಭಗೊಂಡಾಗ, ಅಲ್ಲಿಯ ತನಕ ಕೇವಲ ಶೇ.೧ರಷ್ಟಿದ್ದ ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದು ಶೇ.೪೨ಕ್ಕೇರಿತು. ಅಮೆರಿಕಕ್ಕೂ ಇದರಿಂದ ಕಣ್ಣು ಕೆಂಪಾಗಿತ್ತು. ಈ ತೈಲ ಆಮದಿನ ಭರಪೂರ ಲಾಭ ಪಡೆದುದು, ಭಾರತದ ಖಾಸಗಿ ತೈಲ ಸಂಸ್ಕರಣದ 'ಆನಿ' ಕಂಪೆನಿಗಳು. ಈ ಕಡಿಮೆ ಬೆಲೆಯ ತೈಲದ ಲಾಭ ಡೈನಾಮಿಕ್ ಪ್ರೆಸಿಂಗ್ ಪದ್ಧತಿಯ ಮೂಲಕ ದೇಶದ ಜನತೆಗೆ ಸಿಗಲೇ ಇಲ್ಲ. ಸಸ್ತಾದರಕ್ಕೆ ಕಚ್ಚಾತೈಲ ಖರೀದಿಸಿ, ಯುರೋಪ್ ಮತ್ತಿತರ ದೇಶಗಳಿಗೆ ಮಾರಾಟ ಮಾಡಿದ್ದರಿಂದ ಖಾಸಗಿ ಕಂಪೆನಿಗಳಿಗೆ ದೊರೆತ ಲಾಭ ಅಂದಾಜು ೧.೫ ಲಕ್ಷ ಕೋಟಿ ರೂ. ಎಂದು ಹೇಳಲಾಗುತ್ತಿದೆ. ಇದರಿಂದ ಕೋಪಗೊಂಡ ಅಮೆರಿಕ ಭಾರತಕ್ಕೆ ದಂಡನಾ ತೆರಿಗೆ ವಿಽಸಿದ್ದು… ಇತ್ಯಾದಿಯೆಲ್ಲ ಈಗ ಹಳೆಯ ಕಥೆ.

ಈ ಎಲ್ಲ ಬೆಳವಣಿಗೆಗಳ ನಡುವೆ ದೇಶದಲ್ಲಿ ತೈಲಬೆಲೆ ಬಹುತೇಕ ಸ್ಥಿರವಾಗಿಯೇ ಇತ್ತು. ತನ್ನ ತೈಲ ಅವಶ್ಯಕತೆಗಳಿಗೆ ಶೇ.೮೫ರಷ್ಟು ಆಮದನ್ನೇ ನೆಚ್ಚಿಕೊಂಡಿರುವ ಭಾರತ ಸರ್ಕಾರ, ಕೋವಿಡ್ ಕಾಲದಲ್ಲಿ ದೊರೆತ ಎಥನಾಲ್ ಅನ್ನು ಪೆಟ್ರೋಲ್‌ಗೆ ಮಿಶ್ರಣ ಮಾಡುವ ಅರೆಬರೆ ಯೋಚನೆ, ವಿದ್ಯುತ್ ಚಾಲಿತ ವಾಹನಗಳತ್ತ ಉದಾಸೀನಚಿತ್ತ ಬೀರಿದ್ದು ಬಿಟ್ಟರೆ, ದೇಶದ ಒಳಗೆ ಇಂಧನ ಸ್ವಾವಲಂಬನೆಗೆ ಪ್ರಬಲ ಇಚ್ಛಾಶಕ್ತಿ ತೋರಿಸಲಿಲ್ಲ. ಈಗ ನಿಜವಾದ ಸಂಕಟ ಎದುರಾಗಿರುವಾಗ, ಸರ್ಕಾರ 'ಮೊಸಳೆ ಮೊಸಳೆ' ಎಂದು ಬೊಬ್ಬಿಡಲಾರಂಭಿಸಿದೆ, ಆದರೆ ಜನ ನಂಬಲು ಸಿದ್ಧರಿಲ್ಲ.

ಇರಾನ್-ಇಸ್ರೇಲ್/ಅಮೆರಿಕ ಕದನದ ಕಾರಣಕ್ಕೆ, ಭಾರತಕ್ಕೆ ಇಂಧನ ಹೊತ್ತು ತರುವ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಕ್ಕಿಹಾಕಿಕೊಂಡಿವೆ ಮತ್ತು ಅದೇ ವೇಳೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಅಂಕೆ ಮೀರಿ ಕುಸಿತ ಕಾಣತೊಡಗಿದೆ. ಈ ಸ್ಥಿತಿ ಇರುವಾಗಲೂ ಸರ್ಕಾರವು ಪ.ಬಂಗಾಳ, ತಮಿಳುನಾಡು ಇತ್ಯಾದಿ ಚುನಾವಣೆಗಳನ್ನು ಅನುಲಕ್ಷಿಸಿ, ಸುಮಾರು ೭೬ ದಿನಗಳ ಕಾಲ ತೈಲಬೆಲೆಗಳಲ್ಲಿ ಏರುಪೇರು ಮಾಡಿರಲಿಲ್ಲ. ಅರ್ಥಾತ್ ಡೈನಾಮಿಕ್ ಪ್ರೆ ಸಿಂಗ್ ನೀತಿಯನ್ನು ಮತ್ತೊಮ್ಮೆ ತನ್ನ ಮೂಗಿನ ನೇರಕ್ಕೆ ಬಗ್ಗಿಸಿಕೊಂಡಿತು. ಆದರೆ ಈ ಬಾರಿ, ಯುದ್ಧದ ಕಾರಣಕ್ಕೆ ತೈಲಬೆಲೆ ೬೫-೭೦ ನಿಂದ ೧೦೦-೧೧೫ ಎತ್ತರಕ್ಕೆ ಏರಿದೆ. ಅದರ ಫಲವಾಗಿ, ದೇಶದ ತೈಲಕಂಪೆನಿಗಳು ದಿನಕ್ಕೆ ೧೦೦೦ ಕೋಟಿ ರೂ.ಗಳಿಗೂ ಮಿಕ್ಕಿ ನಷ್ಟ ಅನುಭವಿಸ ತೊಡಗಿವೆಯಂತೆ. ಚುನಾವಣೆಗಳು ಮುಗಿಯುವ ತನಕ ದಮ್ಮು ಕಟ್ಟಿಕೊಂಡು ಏದುಸಿರು ಬಿಡುತ್ತಿದ್ದ ತೈಲ ಕಂಪೆನಿಗಳು ಈಗ ಏಕಾಏಕಿ ನಿಟ್ಟುಸಿರು ಹೊರಚೆಲ್ಲತೊಡಗಿದ್ದರ ಪರಿಣಾಮವಾಗಿ, ತೈಲಬೆಲೆಗಳು ಕ್ಷಿಪ್ರಗತಿಯಲ್ಲಿ ಏರುತ್ತಿವೆ. ಜನರಿಗೆ ಏಕಾಏಕಿ ಆಘಾತ ಬೇಡ ಎಂಬ ಕಾರಣಕ್ಕೆ ಈ ದರಗಳೀಗ ಇಂಚಿಂಚಾಗಿ ಏರುತ್ತಿದ್ದರೂ, ತೈಲಕಂಪೆನಿಗಳ ನಷ್ಟ ತಗ್ಗಬೇಕಿದ್ದರೆ, ಪೆಟ್ರೋಲ್ ಬೆಲೆ (ಇದೇ ಅನಿಶ್ಚಿತತೆ ಮುಂದುವರಿದರೆ) ಲೀಟರಿಗೆ ಅಂದಾಜು ೧೩೦-೧೪೦ ರೂ.ಗಳ ಮಟ್ಟಕ್ಕೆ ತೆರಳಿದರೂ ಅಚ್ಚರಿ ಇಲ್ಲ ಎಂದು ಪರಿಣತರು ಅಭಿಪ್ರಾಯಪಡುತ್ತಿದ್ದಾರೆ.

ದೇಶ ಇಂದು ಅನುಭವಿಸುತ್ತಿರುವ ತೈಲ ಶಾಕ್‌ಗೆ, ಇಂಧನಗಳ ಡೈನಾಮಿಕ್ ಪ್ರೆ ಸಿಂಗ್ ನೀತಿಯಲ್ಲಿ ಸರ್ಕಾರದ ಅನಽಕೃತ ಹಸ್ತಕ್ಷೇಪವೇ ಮೂಲಕಾರಣ ಎಂಬುದರಲ್ಲಿ ಸಂಶಯ ಬೇಡ. ಬೇರೆ ದೇಶಗಳಲ್ಲಿ ಇದಕ್ಕಿಂತ ಹೆಚ್ಚು ಏರಿಕೆ ಆಗಿದೆ ಎಂಬ ಸಬೂಬುಗಳು, ತೈಲದ ಮೇಲಿನ ಎಕ್ಸೈಸ್ ಸುಂಕದಲ್ಲಿ ಕಡಿತ, ತೈಲ ರಫ್ತಿನ ಮೇಲೆ ಸುಂಕ ಹೇರಿಕೆ, ಸಾರ್ವಜನಿಕರಿಗೆ ಮಿತಬಳಕೆಯ ಪಾಠದಂತಹ ಹೊರಪದರದ ಸರ್ಕಾರಿ ಕ್ರಮಗಳ ಹೊರತಾಗಿಯೂ ತೈಲ ಬೆಲೆ ಏರಲಿದೆ. ಸರ್ಕಾರವು ಒಂದು ಬಾಯಲ್ಲಿ 'ವ್ಯಾಪಾರ ತನ್ನ ಕಸುಬಲ್ಲ' ಎಂದು ಹೇಳುತ್ತಾ ಇನ್ನೊಂದು ಬಾಯಲ್ಲಿ ತೈಲಬೆಲೆ 'ತನ್ನದೇ ನಿಯಂತ್ರಣದಲ್ಲಿದೆ' ಎಂಬ 'ಪೋಸ್' ಕೊಡುವ ಬದಲು, ಡೈನಾಮಿಕ್ ಪ್ರೆ ಸಿಂಗ್ ಪದ್ಧತಿಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಮತ್ತು ಈ ಹಂತದಲ್ಲೂ ತೈಲ ಸಂಸ್ಕರಿಸಿ ರಫ್ತು ಮಾಡುತ್ತಿರುವ 'ಆನಿ' ಕಂಪೆನಿಗಳಿಗೆ 'ದೇಶ ಮೊದಲು' ಎಂಬ ಪಾಠ ಮಾಡಬೇಕು; ದೇಶದಲ್ಲಿ ತಾತ್ಕಾಲಿಕವಾಗಿ ರಫ್ತಾಗದೇ ಉಳಿಯಬಹುದಾದ ತೈಲ ಸಂಗ್ರಹಕ್ಕೆ ತುರ್ತಾಗಿ ಸೂಕ್ತ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಬೇಕು. ಅಮೆರಿಕವನ್ನು ನಂಬಿಕೊಂಡು, ಅವರ ಅನುಮತಿ ಪಡೆದು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ, ಇರಾನ್ ಬಳಿ ಅಂಗಲಾಚಿ ತನ್ನ ಹಡಗುಗಳನ್ನು ಹಾರ್ಮುಜ್‌ನಿಂದ ಹೊರಬಿಡಿರೆಂದು ಕೇಳುವ ಸ್ಥಿತಿ ಭಾರತಕ್ಕೆ ಹೇಳಿಸಿದ್ದಲ್ಲ.

” ೨೦೨೨ ಫೆಬ್ರವರಿಯಲ್ಲಿ ಉಕ್ರೇನ್-ರಷ್ಯಾ ಕದನ ಆರಂಭಗೊಂಡಾಗ, ಅಲ್ಲಿಯ ತನಕ ಕೇವಲ ಶೇ.೧ರಷ್ಟಿದ್ದ ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದು ಶೇ.೪೨ಕ್ಕೇರಿತು. ಅಮೆರಿಕಕ್ಕೂ ಇದರಿಂದ ಕಣ್ಣು ಕೆಂಪಾಗಿತ್ತು. ಈ ತೈಲ ಆಮದಿನ ಭರಪೂರ ಲಾಭ ಪಡೆದುದು, ಭಾರತದ ಖಾಸಗಿ ತೈಲ ಸಂಸ್ಕರಣದ 'ಆನಿ' ಕಂಪೆನಿಗಳು. ಈ ಕಡಿಮೆ ಬೆಲೆಯ ತೈಲದ ಲಾಭ ಡೈನಾಮಿಕ್ ಪ್ರೆಸಿಂಗ್ ಪದ್ಧತಿಯ ಮೂಲಕ ದೇಶದ ಜನತೆಗೆ ಸಿಗಲೇ ಇಲ್ಲ. ಸಸ್ತಾದರಕ್ಕೆ ಕಚ್ಚಾತೈಲ ಖರೀದಿಸಿ, ಯುರೋಪ್ ಮತ್ತಿತರ ದೇಶಗಳಿಗೆ ಮಾರಾಟ ಮಾಡಿದ್ದರಿಂದ ಖಾಸಗಿ ಕಂಪೆನಿಗಳಿಗೆ ದೊರೆತ ಲಾಭ ಅಂದಾಜು ೧.೫ ಲಕ್ಷ ಕೋಟಿ ರೂ. ಎಂದು ಹೇಳಲಾಗುತ್ತಿದೆ”

ಇಂಧನ ಬೆಲೆ ಏರಿಕೆಗೆ ಮೂಲ ಕಾರಣ:

* ಇಂಧನಗಳ ಡೈನಾಮಿಕ್ ಪ್ರೆ ಸಿಂಗ್ ನೀತಿಯಲ್ಲಿ ಸರ್ಕಾರದ ಅನಧಿಕೃತ ಹಸ್ತಕ್ಷೇಪ

* ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಅಂಕೆ ಮೀರಿ ಕುಸಿತ ಕಂಡಿದ್ದು

* ಪ.ಬಂಗಾಳ, ತಮಿಳುನಾಡು ಇತ್ಯಾದಿ ಚುನಾವಣೆ ವೇಳೆ ೭೬ ದಿನ ಡೈನಾಮಿಕ್ ಪ್ರೆ ಸಿಂಗ್ ನೀತಿಯನ್ನು ತನ್ನ ಮೂಗಿನ ನೇರಕ್ಕೆ ಬಗ್ಗಿಸಿಕೊಂಡಿದ್ದು

* ದೇಶದ ಒಳಗೆ ಇಂಧನ ಸ್ವಾವಲಂಬನೆಗೆ ಪ್ರಬಲ ಇಚ್ಛಾಶಕ್ತಿ ತೋರಿಸದಿರುವುದು

* ಜನರಿಗೆ ಇಂಧನ ಉಳಿಸಿ ಎಂದು ಪಾಠ ಮಾಡುವ ಕೇಂದ್ರ ಸರ್ಕಾರ ಈ ಸ್ಥಿತಿಯಲ್ಲೂ ತೈಲ ಸಂಸ್ಕರಿಸಿ ರಫ್ತು ಮಾಡುತ್ತಿರುವ 'ಆನಿ' ಕಂಪೆನಿಗಳಿಗೆ 'ದೇಶ ಮೊದಲು' ಎಂಬ ಪಾಠ ಮಾಡದಿರುವುದು

Dailyhunt
Disclaimer: This content has not been generated, created or edited by Dailyhunt. Publisher: Andolana