ಮಡಿಕೇರಿ: ಮೋಡ ಬಿತ್ತನೆಯ ಚರ್ಚೆಯ ನಡುವೆಯೇ ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಿದೆ. ನಿನ್ನೆ ರಾತ್ರಿಯಿಂದ ಜಿಲ್ಲೆಯ ಹಲವೆಡೆ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದೆ. ಬ್ರಹ್ಮಗಿರಿ ತಪ್ಪಲಿನಲ್ಲೂ ಎಡೆಬಿಡದೆ ಮಳೆ ಮುಂದುವರಿದಿದ್ದು, ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ.
ಭಾರಿ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತಗೊಂಡಿದೆ. ಈ ಬಾರಿ ಮೂರನೇ ಬಾರಿಗೆ ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ಸಂಗಮದ ಮುಂದಿನ ಉದ್ಯಾನವನದವರೆಗೂ ಕಾವೇರಿ ನದಿ ನೀರು ಏರಿಕೆಯಾಗಿದೆ.
ಇದೇ ವೇಳೆ, ಮಡಿಕೇರಿ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ. ಇದರಿಂದ ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದೆ.
ಇದರ ನಡುವೆ, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟಪಳ್ಳಿ ಉಂಬಾಳೆ ಭಾಗದ ಜೇನುಗುಂಡಿ ಎಂಬಲ್ಲಿ ಬರೆಕುಸಿತ ಸಂಭವಿಸಿದೆ. ಬೆಳಿಗ್ಗೆ ಸುರಿದ ಮಳೆಗೆ ರಸ್ತೆ ಮೇಲೆ ಮಣ್ಣು ಕುಸಿದು ಬಿದ್ದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಸ್ಥಳದಲ್ಲಿ ಈ ಹಿಂದೆಯೂ ಬರೆಕುಸಿತ ಸಂಭವಿಸಿತ್ತು. ಇದೀಗ ಮತ್ತೆ ಮಣ್ಣು ಕುಸಿದಿರುವುದರಿಂದ ತಕ್ಷಣ ಮಣ್ಣು ತೆರವುಗೊಳಿಸಿ ರಸ್ತೆ ಸಂಪರ್ಕ ಪುನಃ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
