ಮೈಸೂರು: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್‌ಎಸ್) ಮೈಸೂರಿನಲ್ಲಿ ಕ್ಷೇಮ ಕೇಂದ್ರ ತೆರೆಯಲು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಕೃತ ಅನುಮೋದನೆ ದೊರೆತಿದ್ದು, ಹಿಂದಿನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹರ್ಷವರ್ಧನ್ ಅವರು ಬರೆದಿರುವ ಅಧಿಕೃತ ಅನುಮೋದನಾ ಪ್ರತಿಯನ್ನು ಸಂಸದ ಪ್ರತಾಪಸಿಂಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಡಿ.12, 2019ರಂದು ಮೈಸೂರಿನಲ್ಲಿ ಸಿಜಿಎಚ್‌ಎಸ್ ವೆಲ್‌ನೆಸ್ ಸೆಂಟರ್ ಸ್ಥಾಪಿಸಬೇಕೆಂದು ನೀವು ನೀಡಿದ್ದ ಮನವಿಯನ್ನು ಪರಿಶೀಲಿಸಿ ಮೈಸೂರು ಸೇರಿದಂತೆ ದೇಶದ 16 ಹೊಸ ವೆಲ್‌ನೆಸ್ ಸೆಂಟರ್‌ಗಳನ್ನು ತೆರೆಯಲು ಸಚಿವಾಲಯ ಅನುಮೋದನೆ ನೀಡಿದೆ. ಇದಕ್ಕಾಗಿ ಸೂಕ್ತ ಸ್ಥಳ ಗುರುತಿಸಿ ಸಿಜಿಎಚ್‌ಎಸ್ ಅಧಿಕಾರಿಗಳಿಗೆ ಮುಂದಿನ ಪ್ರಕ್ರಿಯೆಗಳಲ್ಲಿ ನೆರವಾಗಬೇಕೆಂದು ಮನವಿ ಮಾಡುತ್ತೇನೆ' ಎಂದು ಪತ್ರದಲ್ಲಿ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಜೂ.30ರಂದು ಹೊರಡಿಸಿರುವ ಅಧಿಕೃತ ಆದೇಶ ಪತ್ರವನ್ನು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಸಿಜಿಎಚ್‌ಎಸ್ ವೆಲ್‌ನೆಸ್ ಸೆಂಟರ್ ತೆರೆಯಲು ಅನುಮತಿ ನೀಡಿದ ಕೇಂದ್ರ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದಿದ್ದಾರೆ.
'ಕ್ಷೇಮ ಕೇಂದ್ರ ಸ್ಥಾಪನೆಗೆ ಸಂಸದರೊಂದಿಗೆ ಚರ್ಚಿಸಿ ಸ್ಥಳ ನಿಗದಿಪಡಿಸಬೇಕಿದೆ. ಕಳೆದ ಸಾಕಷ್ಟು ವರ್ಷಗಳಿಂದ ಸೂಕ್ತ ದಾಖಲೆಗಳನ್ನು ಒದಗಿಸಿ ಮನವಿ ಸಲ್ಲಿಸಿದ್ದರ ಫಲವಾಗಿ ಮೈಸೂರಿಗೆ ವೆಲ್‌ನೆಸ್ ಸೆಂಟರ್ ಅನುಮೋದನೆಯಾಗಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಇರುವ ಕ್ಷೇಮ ಕೇಂದ್ರ ಮೈಸೂರಿಗೂ ಶೀಘ್ರದಲ್ಲೇ ಬರಲಿರುವುದು ಸಂತಸದ ಸಂಗತಿ' ಎಂದು ಕೇಂದ್ರ ಸರ್ಕಾರಿ ನೌಕರರ ಕಲ್ಯಾಣ ಸಮನ್ವಯ ಸಮಿತಿಯ ಕಾರ್ಯದರ್ಶಿ ಎ.ಆರ್.ಕೀರ್ತಿ ಪ್ರತಿಕ್ರಿಯಿಸಿದ್ದಾರೆ.
ಏನಿದು ಸಿಜಿಎಚ್‌ಎಸ್ ಕ್ಷೇಮ ಕೇಂದ್ರ?
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್‌ಎಸ್- ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ ಸ್ಕೀಮ್) ತೆರೆಯಲಾಗುವ ಕ್ಷೇಮ ಕೇಂದ್ರಗಳಲ್ಲಿ (ವೆಲ್‌ನೆಸ್ ಸೆಂಟರ್) ಕೇಂದ್ರ ಸರ್ಕಾರಿ ನೌಕಕರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ದೊರೆಯುತ್ತದೆ. ಅರ್ಜಿ ಸಲ್ಲಿಸಿ ಸದಸ್ಯತ್ವ ಕಾರ್ಡ್ ಪಡೆದ ನೌಕರರು ಕ್ಷೇಮ ಕೇಂದ್ರಗಳಲ್ಲಿ ಅಥವಾ ಸಿಜಿಎಚ್‌ಎಸ್ ಕಾರ್ಡ್ ಅನ್ನು ಪರಿಗಣಿಸುವ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಪಯೋಗ ಪಡೆಯಬಹುದು.

