ಮೈಸೂರು: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮದುಮಲೈ ವನ್ಯಧಾಮದಲ್ಲಿ ಕೆಲ ದಿನಗಳಿಂದಲೂ ನಾಲ್ಕು ಜನರನ್ನು ಕೊಂದಿದ್ದ 13 ವರ್ಷದ ಗಂಡು ಹುಲಿ ಶುಕ್ರವಾರ ಬೆಳಿಗ್ಗೆ ಸೆರೆಯಾಗಿದ್ದು, ಮೈಸೂರಿನ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ತರಲಾಗಿದೆ.
21ನೇ ದಿನದ ಕಾರ್ಯಾಚರಣೆಯಲ್ಲಿ ಹುಲಿಯನ್ನು ಮೊಯಾರ್ ರಸ್ತೆಯ ಬಳಿ ಸೆರೆ ಹಿಡಿಯಲಾಗಿದ್ದು, ಶುಕ್ರವಾರ ಮಧ್ಯರಾತ್ರಿ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಆಂದೋಲನಕ್ಕೆ ತಿಳಿಸಿದರು.
ಇದುವರೆಗೂ ನಾಲ್ಕು ಮಂದಿಯನ್ನು ಹಾಗೂ 30 ಜಾನುವಾರುಗಳನ್ನು ಕೊಂದು, ಭಾರೀ ಆತಂಕ ಸೃಷ್ಟಿಸಿದ್ದ ʻಎಂಡಿಟಿ-23ʼ ಹುಲಿಯನ್ನು ತಮಿಳುನಾಡು ಅರಣ್ಯ ಇಲಾಖೆ, ಎಸ್‌ಟಿಎಫ್ ಕಾರ್ಯಾಚರಣೆ ನಡೆಸಿ ಕೊನೆಗೂ ಜೀವಂತ ಸೆರೆಯಾಗಿದೆ. ಇದರಿಂದ ನೀಲಗಿರಿ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹತ್ಯೆಗೆ ಆದೇಶವಾಗಿತ್ತು
ನೀಲಗಿರಿ ಜಿಲ್ಲೆಯಲ್ಲಿ ನರಭಕ್ಷಕ ಹುಲಿಯ ಕಾಟ ಮಿತಿಮೀರಿತ್ತು. ಕೆಲ ದಿನಗಳಿಂದ ನಾಲ್ವರು ವ್ಯಕ್ತಿಗಳನ್ನು ಹುಲಿ ಕೊಂದುಹಾಕಿತ್ತು. ಮೇಕೆ ಸೇರಿದಂತೆ 30 ಜಾನುವಾರುಗಳನ್ನು ತಿಂದು ಹಾಕಿತ್ತು. ಆತಂಕ ಸೃಷ್ಟಿಸಿದ್ದ ಹುಲಿಯನ್ನು ಹತ್ಯೆ ಮಾಡಬೇಕು ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ನೀಡಿದ್ದರು. ಇದರಿಂದ ಹುಲಿಯನ್ನು ಕೊಲ್ಲಲು 10 ಮಂದಿಯ ತಂಡ ನೀಲಗಿರಿ ಜಿಲ್ಲೆಯಲ್ಲಿ ಬೀಡು ಬಿಟ್ಟಿತ್ತು. ಆದರೆ, ಹೈಕೋರ್ಟ್ ಹುಲಿ ಕೊಲ್ಲಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿತ್ತು. ಹಾಗಾಗಿ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲು ನಿರ್ಧರಿಸಲಾಯಿತು. ಕೊನೆಗೆ ಎಂಡಿಟಿ- 23 ಹುಲಿಯನ್ನು ಅನಸ್ತೇಶಿಯಾ (ಅರಿವಳಿಕೆ) ಬಳಸಿ ಗುರುವಾರ ಸಂಜೆಯೇ ಹಿಡಿಯಲು ಯತ್ನಿಸಿದರೂ ನೀಡಿದರೂ ಸೆರೆಸಿಗದ ಹುಲಿ, ಶುಕ್ರವಾರ ಮೂರನೇ ಅರಿವಳಿಕೆ ನೀಡಿದ್ದರಿಂದ ಪ್ರಜ್ಞೆತಪ್ಪಿತು. ನಂತರ ಹುಲಿಯನ್ನು ಸೆರೆ ಹಿಡಿಯಲಾಯಿತು ಎಂದು ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊರ ರಾಜ್ಯದ್ದು ಮೊದಲು: ಕರ್ನಾಟಕದಲ್ಲಿ ಮಿತಿ ಮೀರಿದ್ದ ವನ್ಯಜೀವಿಗಳ ಉಪಟಳದಿಂದ ಅವುಗಳನ್ನು ರಕ್ಷಿಸಿದರೆ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ದಶಕದ ಹಿಂದೆಯೇ ಕೂರ್ಗಳ್ಳಿಯಲ್ಲಿ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ರಾಜ್ಯದಲ್ಲಿಯೇ ಸೆರೆ ಹಿಡಿದ 8 ಹುಲಿಗಳಿದ್ದು, ಹೊರ ರಾಜ್ಯದಿಂದ ತಂದಿರುವುದು ಇದೇ ಮೊದಲು. ಚೆನ್ನೈಗೆ ಸಾಗಿಸಲು ದೂರವಾಗುವ ಕಾರಣದಿಂದ ಅಲ್ಲಿನ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ವಿನಂತಿಸಿಕೊಂಡ ಮೇರೆಗೆ ಮೈಸೂರು ಕೇಂದ್ರಕ್ಕೆ ತರಲು ಒಪ್ಪಲಾಯಿತು. ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎನ್ನುವುದು ಬಿ.ಪಿ.ರವಿ ಅವರ ವಿವರಣೆ.

