ಈ ವರ್ಷದ ನಾಡ ಹಬ್ಬ ದಸರಾದಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗೋಷ್ಠಿಯ ಉಪಸಮಿತಿಯವರು ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಪ್ರಧಾನ ಕವಿಗೋಷ್ಠಿ, ಯುವ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ ಹಾಸ್ಯ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮತ್ತು ಜನಪದ ಕವಿಗೋಷ್ಠಿ ಹೀಗೆ ಹಲವು ಕವಿಗೋಷ್ಠಿಗಳು ನಡೆಯುತ್ತವೆ.
ಇತ್ತೀಚೆಗಿನ ನಾಲ್ಕೈದು ವರ್ಷಗಳಿಂದ ಈ ಪರಿಯ ಕವಿಗೋಷ್ಠಿಗಳು ನಡೆಯುತ್ತಿವೆ. ಆದರೆ ಪ್ರಧಾನ ಕವಿಗೋಷ್ಠಿ ಮತ್ತು ಜನಪದ ಕವಿಗೋಷ್ಠಿ ಬಿಟ್ಟರೆ ಉಳಿದ ಕವಿಗೋಷ್ಠಿಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತದೆ. ಕೆಲವು ಕವಿಗೋಷ್ಠಿಗಳಲ್ಲಿ ವೇದಿಕೆ ಮೇಲೆ ೨೦ ಮಂದಿಯಿದ್ದರೆ, ವೇದಿಕೆಯ ಮುಂಭಾಗ ಅದಕ್ಕಿಂತಲೂ ಕಡಿಮೆ ಸಂಖ್ಯೆಯ ಪ್ರೇಕ್ಷಕರಿರುತ್ತಾರೆ.
ಪ್ರೇಕ್ಷಕರು ಆಸಕ್ತಿ ತೋರದ ಮೇಲೆ ಈ ರೀತಿಯ ಕವಿಗೋಷ್ಠಿಗಳನ್ನು ಆಯೋಜಿಸುವ ಉದ್ದೇಶವೇನು ಎಂಬ ಪ್ರಶ್ನೆ ಏಳುವುದು ಸಹಜ. ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಂತೆ ಪ್ರಧಾನ ಕವಿಗೋಷ್ಠಿ ಮಾತ್ರ ಜಗನ್ಮೋಹನ ಅರಮನೆಯಲ್ಲಿ ನಡೆಯಲಿ.ಆಗ ಕವಿಗಳಿಗೆ ಮತ್ತು ಕವಿಗೋಷ್ಠಿಗೂ ಹೆಚ್ಚಿನ ಗೌರವ ಇರುತ್ತದೆ.
– ಬೂಕನಕೆರೆ ವಿಜೇಂದ್ರ, ಮೈಸೂರು
