Dailyhunt
ಪರಿಶಿಷ್ಟರೊಬ್ಬರಿಗೆ ಕೇಂದ್ರದ ಸಚಿವ ಸ್ಥಾನ: ಸಂಸದ ಶ್ರೀನಿವಾಸ್‌ ಪ್ರಸಾದ್

ಪರಿಶಿಷ್ಟರೊಬ್ಬರಿಗೆ ಕೇಂದ್ರದ ಸಚಿವ ಸ್ಥಾನ: ಸಂಸದ ಶ್ರೀನಿವಾಸ್‌ ಪ್ರಸಾದ್

ಕೊಳ್ಳೇಗಾಲ: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಏಳು ಮಂದಿ ಲೋಕಸಭಾ ಸದಸ್ಯರಿದ್ದಾರೆ. ಇದರಲ್ಲಿ ಒಬ್ಬರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಆರೋಗ್ಯ ಸರಿ ಇಲ್ಲ. ಆದ್ದರಿಂದ ಸಚಿವ ಸ್ಥಾನ ಬೇಡ ಎಂದು ನಾನೇ ಹೇಳಿದ್ದೇನೆಂದು ಪ್ರಸಾದ್‌ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ನಡೆದು ಎರಡು ವರ್ಷ ತುಂಬಿದೆ. ಬೆಳಗಾವಿ ಸುರೇಶ್ ಅಂಗಡಿ ನಿಧನದಿಂದ ಸಚಿವ ಸ್ಥಾನ ಖಾಲಿ ಇದೆ. ಹಾಲಿ ಪ್ರಹ್ಲಾದ್ ಜೋಶಿ, ಸದಾನಂದಗೌಡರು ಕೇಂದ್ರ ಸಚಿವ ಸಂಪುಟದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ಎರಡು ಸ್ಥಾನ ತುಂಬುವ ಸಾಧ್ಯತೆಯಿದ್ದು, ಎಸ್ಸಿ-ಎಸ್ಟಿಗೆ ಒಂದು ಸ್ಥಾನ, ಇತರರಿಗೆ ಒಂದು ಸ್ಥಾನ ಸಿಗಲಿದೆ ಎಂದಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಗೊಂದಲ ಇಲ್ಲ. ಚಾಮರಾಜನಗರ ಆಕ್ಸಿಜನ್ ದುರಂತದ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್ ಆದೇಶದಂತೆ 2 ಲಕ್ಷ ರೂ. ನೀಡಲಾಗಿದೆ. ನ್ಯಾಯಾಲಯದಲ್ಲಿ ಹಾಗೂ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದ್ದು, ಇದಕ್ಕೆ ಯಾರೂ ಸಹ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಮಾತನಾಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಆ ಪಕ್ಷಕ್ಕೆ ಬಿಟ್ಟದ್ದು. ಆದ್ದರಿಂದ ಏನೂ ಮಾತನಾಡುವುದಿಲ್ಲ. ದಲಿತ ಸಿಎಂ ಆಗಿಲ್ಲ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Andolana