Dailyhunt
ಪಿ ಆರ್ ವೆಂಕಟೇಶ್ ಹೊಸ ಕವಿತೆ- ಸಾಕಿನ್ನು ಸಾಕು

ಪಿ ಆರ್ ವೆಂಕಟೇಶ್ ಹೊಸ ಕವಿತೆ- ಸಾಕಿನ್ನು ಸಾಕು

ಅವಧಿ 4 years ago

ಪಿ ಆರ್ ವೆಂಕಟೇಶ್

ಕವಿತೆಯೆ
ಸಾಕಿನ್ನು ಸಾಕು
ನಿಂತಲ್ಲೇ ನಿಂತು ಕೂತಲ್ಲೆ ಕುಸಿವ ಉಸುಗಿನರಮನೆ ವಾಸ.
ಬಿಟ್ಪೆದ್ದು ಜಡ ಕಡೆಯ ಬೇಕು
ಜಿಗಿಯ ಬೇಕು ಸಮುದ್ರ ಮಂಥನಕೆ.

ಕವಿತೆಯೆ
ಇದ್ದಲ್ಲೇ ಇದ್ದು ಸಾಯಲಾರೆ
ನಾನೂ ಸೊರಗಿ ನಿನ್ನೂ ಸೊರಗಿಸಲಾರೆ
ಕರಗಿಸಲಿ ನನ್ನ ಹೊಸ ಪಯಣದ ದಣಿವು
ಇದ್ದರೆ ಸಾಕು
ಎಲ್ಲರೆದೆ ತಟ್ಟುವ ಹೃದಯ ಬಡಿತದ ಹರವು
ನುಗ್ಗುತ್ತೇನೆ ಹರಿತದೆದುರು ಈಸಲು
ಕಾಣದ ದೂರ ದೂರದ ತಾಣಕೆ
ಕೊರಡು ತೊರೆದ ಕೊಂಬೆ ಚಿಗುರಿಗೆ ಕೊರಳಾಗಲು
ಬೇರೊಳಗಿನ ಉಸಿರಾಗಲು
ಗೆದ್ದಲೊಳಗಿನ ಹುಳು ಬದುಕನೊಡೆದು
ನನ್ನೆದೆಯ ತೆರೆದು
ಜಗದ ಹೊಸ ಕಥೆಗಳೊಳಗೆ ಮೀಯುತ್ತೇನೆ
ಮಾತು ಬದಲಿಸಿ
ಮನ್ವಂತರಗಳ ಮಥಿಸಿ ಮಾಗುತ್ತೇನೆ.

ಕವಿತೆಯೆ
ಮತ್ತೆ ಮತ್ತೆ ಸುತ್ತಲಾರೆ
ಕೊಳೆತು ತೊಡರಾದ ಹಳಸು ಭಾವಗಳ
ಕೆಸರ ಹಾದಿಯ ಸಾವಿನ ಹುದುಲ
ಅರಳ ಬೇಕಿದೆ ಜೀವ
ಹೊಸ ಬಿಸಿಲ ಉಸಿರಾಗಿ
ತಣ್ಣನೆಯ ತೆನೆಯಾಗಿ
ದಮನಿಗಳ ಕುದಿಸಲು
ಜನತೆಯ ದನಿಯೊಳಗಿನ ಕಾವಾಗಿ
ಬೆಟ್ಟ ಬಳ್ಳಿ ಹೂ ಮುಳ್ಳು ಮಣ್ಣು
ತಿಪ್ಷೆ ತರಗಲೆ ಕಸ ಅನ್ನವಾಗಲು
ಮುಗಿಯದ ಹಾದಿ ನುಂಗುವ ನದಿಯಾಗಲು
ಕವಿತೆಯ ಕವಿಯಾಗಲು.

ಕವಿತೆಯೆ
ಉಟ್ಟಿದ್ದು ಸಾಕಿನ್ನು
ಮಾಸು ಘಮಟಿನ ಪಿಸಿದ ಅಂಗಿ
ಬಣ್ಣಗಳ ಮೀಯಬೇಕು
ಅವುಗಳ ಆಳ ಕಲಕಿ ನೂಲ ಹಿಡಿದು
ಹೊಸ ಅಂಗಿ ಹೊಲಿಯಲು ಸೂಜಿಯಾಗುತ್ತೇನೆ
ನಿನ್ನ ಮೈತುಂಬ ಕುಣಿದ ಸೂಜಿ ಹೆಜ್ಜೆಗಳ ಗಾಯ ಕುಣಿಗೆ
ನಿನ್ನಪ್ಪುಗೆಯ ಪ್ರೀತಿ ತುಂಬುತ್ತೇನೆ.

ಕವಿತೆಯೆ
ಹೊಸಬಟ್ಟೆ ತೊಟ್ಟುಣ್ಣ ಬೇಕು ನಾನು
ನಿನ್ನನ್ನೊಟ್ಟಿಗೆ ಸಾಗಲು
ಅದೆಷ್ಟೋ ನದಿಗಳ ಈಸಿ ಸಾಗರವಾಗಲು
ಸವೆದ ಅಟ್ಟೆಗಳ ಕಿತ್ತು
ಹೊಸ ಮೆಟ್ಟು ತೊಟ್ಟು
ಬದುಕು ಪ್ರೀತಿಸಿದಂತೆ ಬದುಕಲು
ಜೀವದುಸಿರಿನ ಗಮುಲ ಚೆಲ್ಲಬೇಕು ನಾನು

Dailyhunt
Disclaimer: This content has not been generated, created or edited by Dailyhunt. Publisher: Avadi