ಮೈಸೂರು: ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಗ್ರಹಾರದ 101 ಗಣಪತಿ ದೇವಸ್ಥಾನ ತೆರವಿಗೆ ವಿರೋಧ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮೈಸೂರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರಿನ 101 ಗಣಪತಿ ದೇವಾಲಯ ನಮ್ಮ ಪ್ರತೀಕ. ನಾವು ಯಾವುದೇ ವಾಹನ ಖರೀದಿ ಮಾಡಿದರು ಇಲ್ಲಿ ಪೂಜೆ ಮಾಡಿಸುತ್ತೇವೆ. ಇದಕ್ಕೆ ನೋಟಿಸ್ ಕೊಟ್ಟು ನೆಲಸಮ ಮಾಡುತ್ತೇವೆ ಅಂತಾ ಜಿಲ್ಲಾಡಳಿತ ಹೇಳಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ. ಅದಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಕಳ್ಳರಂತೆ ಬೆಳಗಿನ ಜಾವ ಬಂದು ದೇಗುಲ ಒಡೆಯುತ್ತಿದ್ದಾರೆ ಎಂದು ಹೇಳಿದರು.
ಮಸೀದಿ, ಚರ್ಚ್ಗಳು ಇಲ್ವಾ?
ಇದನ್ನು ಒಪ್ಪಲು ನಮಗೆ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ ಪ್ರತಾಪ್ ಸಿಂಹ, ಕೇವಲ ದೇವಾಲಯಗಳನ್ನು ಏಕೆ ಟಾರ್ಗೆಟ್ ಮಾಡ್ತಿದ್ದೀರಿ? ಮಸೀದಿ, ಚರ್ಚ್ಗಳು ಇಲ್ವಾ ಎಂದು ಪ್ರಶ್ನಿಸಿದ್ದಾರೆ.
2009 ರಿಂದ ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಅವಕಾಶ ಕೊಟ್ಟಿಲ್ವಾ? ಜಿಲ್ಲಾಡಳಿತ
ಕ್ಯಾತಮಾರನಹಳ್ಳಿ ಅನಧಿಕೃತವಾಗಿ ಮಸೀದಿ ಬಂತು. ಯಾಕೆ ಜಿಲ್ಲಾಡಳಿತ ತಡೆಯಲಿಲ್ಲ? ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಅಲ್ವಾ? 90 ದೇವಾಲಯ ಪಟ್ಟಿ ಮಾಡುವಾಗ ಕೋರ್ಟ್ ನಿರ್ದೇಶದಂತೆ ಜನರ ಅಭಿಪ್ರಾಯ ಕೇಳಿದ್ರಾ? ಎಂದು ಪ್ರಶ್ನಿಸಿದ ಸಂಸದ ಪ್ರತಾಪ್, ಜಿಲ್ಲಾಡಳಿತಕ್ಕೆ ನಾನು ದಬಾಯಿಸಿದೆ ಅಂತಾರೆ. ನನ್ನ ಧರ್ಮಕ್ಕೆ ಅನ್ಯಾಯವಾದಾಗ ಆಕ್ರೋಶ ಸಹಜ. ಧರ್ಮ ಪ್ರೀತಿಸುವ ಎಲ್ಲರಿಗೂ ಈ ಆಕ್ರೋಶ ಸಹಜ. ಸುಪ್ರೀಂಕೋರ್ಟ್ ಆದೇಶ ಅಂತಾ ಮೈಸೂರು ಜಿಲ್ಲಾಡಳಿತ ಜನರ ದಾರಿ ತಪ್ಪಿಸುತ್ತಿದೆ ಎಂದು ಹೇಳಿದರು.
ನಾವು ನ್ಯಾಯಾಲಯಕ್ಕೆ ವಿರೋಧವಿಲ್ಲ. ನ್ಯಾಯಾಲಯ ಸೂಚಿಸಿದ ನಿರ್ದೇಶನಗಳನ್ನೆ ಜಿಲ್ಲಾಡಳಿತ ಪಾಲಿಸಿಲ್ಲ. ದೇವರಾಜು ಅರಸು ರಸ್ತೆಯಲ್ಲಿನ ದರ್ಗಾ ಬಗ್ಗೆ ನಾನು ಮಾತಾಡಿದ್ದೆ. ಆ ದರ್ಗಾ ಪಾದಚರಿ ರಸ್ತೆ ಮೇಲಿದೆ. ಅದರಿಂದ ಜನರಿಗೆ ತೊಂದರೆ ಆಗುತ್ತೆ. ಇದನ್ನು ತೆರವು ಮಾಡಲು ಜಿಲ್ಲಾಡಳಿತ ಸಿದ್ಧವಾಗಿಲ್ಲ. ಇದಕ್ಕೆ ನಾನು ತೊಡೆ ನಡುಗುತ್ತಾ ಎಂದು ಕೇಳಿದ್ದೆ. ಜನರಿಗೆ ತೀರಾ ತೊಂದರೆ ಆಗುತ್ತೆ ಅಂದರೆ ಸ್ಥಳಾಂತರ ಮಾಡಿ ಎಂದು ಪ್ರತಾಪ್ ಹೇಳಿದರು.
Post navigation
ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿಯಿಂದ ನಾಳೆ ಗಜಪಯಣ ಆರಂಭ..! ರಾಜ್ಯದಲ್ಲಿ ಮುಂದಿನ ತಿಂಗಳು ಕೊವಿಡ್ ಮೂರನೇ ಅಲೆ ಭೀತಿ; ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ!
