ನವದೆಹಲಿ: ವಾಹನ ಸವಾರರಿಗೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್ ಸಿಕ್ಕಿದ್ದು, ಕೇಂದ್ರ ಸರ್ಕಾರ 11 ದಿನಗಳಲ್ಲಿ 4ನೇ ಬಾರಿ ದರ ಏರಿಕೆ ಮಾಡಿದೆ. ಪೆಟ್ರೋಲ್ ದರ ಲೀಟರ್ಗೆ 2.61 ರೂ. ಮತ್ತು ಡೀಸೆಲ್ 2.71 ರೂ. ಹೆಚ್ಚಳವಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ತಕ್ಷಣದಿಂದಲೇ ಜಾರಿಯಾಗಿದ್ದು, ಆ ಮೂಲಕ ದೆಹಲಿಯಲ್ಲಿಯೇ ಲೀಟರ್ ಪೆಟ್ರೋಲ್ ದರ 100 ರೂ.
ಗಡಿ ದಾಟಿದೆ. ರಾಜಧಾನಿಯಲ್ಲಿಂದು ಲೀಟರ್ ಪೆಟ್ರೋಲ್ ದರ 102.12 ರೂ. ಮತ್ತು ಲೀಟರ್ ಡೀಸೆಲ್ ದರ 95.20 ರೂ. ಆಗಿದೆ.
ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್
11 ದಿನಗಳಲ್ಲಿ 4ನೇ ಬಾರಿ ಇಂಧನ ದರ ಏರಿಕೆ
ಸತತ ಬೆಲೆ ಏರಿಕೆಗೆ ವಾಹನ ಸವಾರರು ಕಂಗಾಲು
ಮೇ 15ರಿಂದ ದರ ಪರಿಷ್ಕರಣೆ ಪುನರಾರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಸರ್ಕಾರಿ ಸ್ವಾಮ್ಯದ ಆಯಿಲ್ ಆಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್ ಲಿಮಿಟೆಡ್ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ತೈಲ ಕಂಪನಿಗಳ ನಷ್ಟವೇ ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

