Dailyhunt Logo
  • Light mode
    Follow system
    Dark mode
    • Play Story
    • App Story
ಐಪಿಎಲ್ 2026: ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ

ಐಪಿಎಲ್ 2026: ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ

Bengaluru Wire 1 week ago

ಹಮದಾಬಾದ್, ಜೂ.01 www.bengaluruwire.com: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟನ್ಸ್ (GT) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಈ ಮೂಲಕ 2026ರ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಆರ್‌ಸಿಬಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಸುದೀರ್ಘ ಕಾಲದ ಬಳಿಕ ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.

 ಐಪಿಎಲ್-2026 ಗೆಲುವಿನ ಮೊತ್ತ 20 ಕೋಟಿ ರೂ. ಚೆಕ್ ಹಾಗೂ ವಿಜಯದ ಕಪ್ ಪಡೆದ ಆರ್ ಸಿಬಿ ತಂಡದ ನಾಯಕ ರಜತ್ ಪಾಟಿದಾರ್. (ಚಿತ್ರಕೃಪೆ: ಜಿಯೋ ಹಾಟ್ ಸ್ಟಾರ್)

​ಟೈಟನ್ಸ್ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಆರ್‌ಸಿಬಿ ಬೌಲರ್‌ಗಳು:

​ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ಧಾರ ಅತ್ಯಂತ ಯಶಸ್ವಿಯಾಯಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡವು ಆರ್‌ಸಿಬಿ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಟೈಟನ್ಸ್ ಪರ ವಾಷಿಂಗ್ಟನ್ 37 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿ ತಂಡಕ್ಕೆ ಆಸರೆಯಾದರೆ, ಸಿಂಧು 20 ಹಾಗೂ ಬಟ್ಲರ್ 19 ರನ್ ಕಾಣಿಕೆ ನೀಡಿದರು.

​ಪಂದ್ಯದ ಅಧಿಕೃತ ಸಾರಾಂಶದ ಪ್ರಕಾರ, ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ರಸಿಕ್ 27 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಭುವನೇಶ್ವರ್ 29 ರನ್‌ಗಳಿಗೆ 2 ವಿಕೆಟ್ ಹಾಗೂ ಹೇಜ್ಲ್‌ವುಡ್ 37 ರನ್‌ಗಳಿಗೆ 2 ವಿಕೆಟ್ ಪಡೆದು ಎದುರಾಳಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಕೃನಾಲ್ ಪಾಂಡ್ಯ 1 ವಿಕೆಟ್ ತಮ್ಮದಾಗಿಸಿಕೊಂಡರು.

​'ಕಿಂಗ್' ಕೋಹ್ಲಿ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್; ಸಿಕ್ಸರ್ ಮೂಲಕ ವಿಜಯೋತ್ಸವ:

 (ಚಿತ್ರಕೃಪೆ: ಜಿಯೋಸ್ಟಾರ್)

​156 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ರನ್‌ಗಳ ಮಳೆ ಹರಿಸಿದ್ದು ರನ್ ಮಷಿನ್ ವಿರಾಟ್ ಕೋಹ್ಲಿ. ಕೇವಲ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದ ಕೋಹ್ಲಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಪಂದ್ಯದ ಕೊನೆಯ ಹಂತದಲ್ಲಿ ಕೋಹ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್‌ಗಳಿಗೆ ತಲುಪಿಸಿ, ಆರ್‌ಸಿಬಿ ಅಭಿಮಾನಿಗಳ ನೆಚ್ಚಿನ ಘೋಷಣೆಯಾದ "ಈ ಸಲ ಕಪ್ ನಮ್ದೇ" ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

​ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಸಾಥ್ ನೀಡಿದ ಇಂಪ್ಯಾಕ್ಟ್ ಪ್ಲೇಯರ್ ವೆಂಕಟೇಶ್ 16 ಎಸೆತಗಳಲ್ಲಿ 32 ರನ್ ಮತ್ತು ಡೇವಿಡ್ 17 ಎಸೆತಗಳಲ್ಲಿ 24 ರನ್ ಗಳಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಗುಜರಾತ್ ಪರ ರಶೀದ್ ಖಾನ್ 25 ರನ್‌ಗಳಿಗೆ 2 ವಿಕೆಟ್ ಪಡೆದರೆ, ಅರ್ಷದ್, ಸಿರಾಜ್ ಹಾಗೂ ರಬಾಡ ತಲಾ ಒಂದು ವಿಕೆಟ್ ಪಡೆದರು.

 (ಚಿತ್ರಕೃಪೆ: ಜಿಯೋಸ್ಟಾರ್)

​"ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುವುದು ಅತ್ಯಂತ ಹೆಮ್ಮೆಯ ವಿಷಯ. ನಮ್ಮ ತಂಡವು ಯಾವುದೇ ಹಂತದಲ್ಲೂ ಛಲ ಬಿಡದೆ ಹೋರಾಡಿತು" ಎಂದು ಪಂದ್ಯದ ಬಳಿಕ ವಿರಾಟ್ ಕೋಹ್ಲಿ ಸಂತಸ ಹಂಚಿಕೊಂಡಿದ್ದಾರೆ.

 ಟಾಟಾ ಐಪಿಎಲ್ ರನ್ನರ್ ಅಪ್ ಚೆಕ್ 12.5 ಕೋಟಿ ಚೆಕ್ ಅನ್ನು ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮಾನ್ ಗಿಲ್ ಪಡೆದುಕೊಂಡರು. (ಚಿತ್ರಕೃಪೆ: ಜಿಯೋ ಹಾಟ್ ಸ್ಟಾರ್)

ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಯ ಹೊಸ ದಾಖಲೆ:

​ಈ ಮಹಾಫೈನಲ್ ಪಂದ್ಯದ ನೇರಪ್ರಸಾರವು ಡಿಜಿಟಲ್ ವೀಕ್ಷಣೆಯಲ್ಲೂ ಅಭೂತಪೂರ್ವ ದಾಖಲೆ ಬರೆದಿದೆ. ಪಂದ್ಯದ ಲೈವ್ ಸ್ಕ್ರೀನ್ ನಲ್ಲಿ ಲಭ್ಯವಿರುವ ಮಾಹಿತಿಯಂತೆ, ಪಂದ್ಯದ ರೋಚಕ ಕ್ಷಣಗಳಲ್ಲಿ ಮತ್ತು ಆರ್‌ಸಿಬಿ ವಿಜಯೋತ್ಸವದ ವೇಳೆಗೆ ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲದಲ್ಲಿ ವೀಕ್ಷಿಸುತ್ತಿದ್ದ ವೀಕ್ಷಕರ ಸಂಖ್ಯೆ (Concurrent Viewership) ಭರ್ಜರಿ 53.3 ಕೋಟಿಯನ್ನು ದಾಟಿ ಜಾಗತಿಕ ದಾಖಲೆ ನಿರ್ಮಿಸಿದೆ.

​ಈ ಐತಿಹಾಸಿಕ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ಐಪಿಎಲ್‌ನ ಗಣ್ಯ ತಂಡಗಳ ಸಾಲಿನಲ್ಲಿ ಭದ್ರ ಸ್ಥಾನ ಪಡೆದುಕೊಂಡಿದ್ದು, ಕೋಟ್ಯಂತರ ಬೆಂಗಳೂರು ಹಾಗೂ ಜಾಗತಿಕ ಅಭಿಮಾನಿಗಳಿಗೆ ಮತ್ತೊಂದು ಸ್ಮರಣೀಯ ಉಡುಗೊರೆಯನ್ನು ನೀಡಿದೆ. (ಚಿತ್ರಕೃಪೆ: ಜಿಯೋ ಹಾಟ್ ಸ್ಟಾರ್)

Join our WhatsApp Channel

Dailyhunt
Disclaimer: This content has not been generated, created or edited by Dailyhunt. Publisher: Bengaluru Wire