Dailyhunt Logo
  • Light mode
    Follow system
    Dark mode
    • Play Story
    • App Story
WhatsApp Username | ಕೇಂದ್ರದ ನೋಟಿಸ್‌ಗೆ ವಾಟ್ಸಾಪ್ ಸ್ಪಷ್ಟನೆ: ಯೂಸರ್‌ನೇಮ್ ಫೀಚರ್ ಇನ್ನೂ ಲೈವ್ ಆಗಿಲ್ಲ, ಭದ್ರತೆಗೆ ಆದ್ಯತೆ

WhatsApp Username | ಕೇಂದ್ರದ ನೋಟಿಸ್‌ಗೆ ವಾಟ್ಸಾಪ್ ಸ್ಪಷ್ಟನೆ: ಯೂಸರ್‌ನೇಮ್ ಫೀಚರ್ ಇನ್ನೂ ಲೈವ್ ಆಗಿಲ್ಲ, ಭದ್ರತೆಗೆ ಆದ್ಯತೆ

Bengaluru Wire 1 week ago

ವದೆಹಲಿ, ಜು.02 www.bengaluruwire.com:​ವಾಟ್ಸಾಪ್ ಯೂಸರ್‌ನೇಮ್ (WhatsApp Username) ವೈಶಿಷ್ಟ್ಯದಿಂದ ವಂಚನೆ ಹೆಚ್ಚಾಗುವ ಆತಂಕ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್‌ಗೆ ಮೆಟಾ ಒಡೆತನದ ವಾಟ್ಸಾಪ್ ಸ್ಪಷ್ಟನೆ ನೀಡಿದೆ.

ಈ ನೂತನ ಫೀಚರ್ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ (not yet live) ಮತ್ತು ಗ್ರಾಹಕರ ಸುರಕ್ಷತೆಗೆ ಅಗತ್ಯವಾದ ಎಲ್ಲ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಕೇಂದ್ರದ ಆತಂಕವೇನು?:

ಮೊಬೈಲ್ ನಂಬರ್ ಇಲ್ಲದೆಯೂ ಕೇವಲ ಯೂಸರ್‌ನೇಮ್ ಬಳಸಿ ಸಂದೇಶ ಕಳುಹಿಸುವ ಈ ಫೀಚರ್‌ನಿಂದ ಪ್ರಸಿದ್ಧ ವ್ಯಕ್ತಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ (Impersonation) ಜನರಿಗೆ ವಂಚಿಸುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು. ಈ ಭದ್ರತಾ ಲೋಪಗಳ ಬಗ್ಗೆ ವಿವರಣೆ ನೀಡುವಂತೆ ಹಾಗೂ ಭಾರತದಲ್ಲಿ ಈ ಫೀಚರ್ ಬಿಡುಗಡೆ ಮಾಡದಂತೆ ಸೂಚಿಸಿ ಮೆಟಾಗೆ ಐಟಿ ನಿಯಮಾವಳಿಗಳ ಅಡಿ ನೋಟಿಸ್ ನೀಡಿತ್ತು. ಸ್ಪಷ್ಟನೆಯನ್ನು ನಿಗದಿತ ಸಮಯದೊಳಗೆ ಸಲ್ಲಿಸಲು ಸರ್ಕಾರವು ಕಟ್ಟಪ್ಪಣೆ ಮಾಡಿತ್ತು.

ವಾಟ್ಸಾಪ್‌ನ ಸ್ಪಷ್ಟನೆ ಹಾಗೂ ಸುರಕ್ಷತಾ ಕ್ರಮಗಳು:

ಸರ್ಕಾರದ ನೋಟಿಸ್ ಬೆನ್ನಲ್ಲೇ ಮಾಹಿತಿ ನೀಡಿರುವ ವಾಟ್ಸಾಪ್ ವಕ್ತಾರರು, ಯೂಸರ್‌ನೇಮ್ ಆಯ್ಕೆಯು ಇನ್ನೂ ಪರೀಕ್ಷಾ ಹಂತದಲ್ಲಿದೆ. ಇದು ಯಾವುದೇ ಬಳಕೆದಾರರಿಗೆ ಲೈವ್ ಆಗಿಲ್ಲ. ವಂಚನೆಗಳನ್ನು ತಡೆಗಟ್ಟಲು ನಾವು ಬಹುಹಂತದ ಭದ್ರತಾ ವ್ಯವಸ್ಥೆಗಳನ್ನು (multiple layers of defense) ರೂಪಿಸುತ್ತಿದ್ದೇವೆ ಎಂದಿದ್ದಾರೆ.

ಹೈ-ಪ್ರೊಫೈಲ್ ಹೆಸರುಗಳ ನಿರ್ಬಂಧ: ವಿಐಪಿಗಳು, ಸರ್ಕಾರಿ ಸಂಸ್ಥೆಗಳು, ಸೆಲೆಬ್ರಿಟಿಗಳು ಹಾಗೂ ವೆರಿಫೈಡ್ ಖಾತೆಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗುತ್ತಿದೆ. ಆ ಯೂಸರ್‌ನೇಮ್‌ಗಳು ಕೇವಲ ಅವುಗಳ ನೈಜ ಮಾಲೀಕರಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಹೊಸ ಸಂದೇಶ ಬಂದಾಗ ಎಚ್ಚರಿಕೆ: ಹೊಸ ಯೂಸರ್‌ನೇಮ್ ಮೂಲಕ ಮೊದಲ ಬಾರಿ ಸಂದೇಶ ಬಂದಾಗ, ಆ ಖಾತೆ ಹೊಸದೇ?, ಅಥವಾ ಅದು ಬೇರೆ ದೇಶದಿಂದ ಬಂದಿದೆಯೇ? ಎಂಬ ಮಾಹಿತಿಯನ್ನು ಗ್ರಾಹಕರಿಗೆ ತೋರಿಸಲಾಗುತ್ತದೆ. ಇದರಿಂದ ಆ ಸಂದೇಶಕ್ಕೆ ಪ್ರತಿಕ್ರಿಯಿಸಬೇಕೋ ಬೇಡವೋ ಎಂಬುದನ್ನು ಗ್ರಾಹಕರು ನಿರ್ಧರಿಸಬಹುದು.

ಊಹೆಗಳಿಗೆ ಬ್ರೇಕ್: ಇನ್ನೊಬ್ಬರ ಯೂಸರ್‌ನೇಮ್ ಅನ್ನು ಪದೇಪದೇ ಊಹಿಸಿ ಹುಡುಕುವ ಪ್ರಯತ್ನಗಳಿಗೂ ನಿರ್ಬಂಧ ಹೇರಲಾಗುತ್ತದೆ.

​ಬಳಕೆದಾರರ ಪ್ರೈವೆಸಿ ಕಾಪಾಡುವ ಉದ್ದೇಶದಿಂದ ಈ ಫೀಚರ್ ತರಲು ವಾಟ್ಸಾಪ್ ಮುಂದಾಗಿತ್ತು. ಆದರೆ, ಆನ್‌ಲೈನ್ ವಂಚನೆಗಳ ಬಗ್ಗೆ ಇರುವ ಕಳವಳಗಳು ದೂರವಾಗಿ, ಸರ್ಕಾರದ ಅನುಮತಿ ಸಿಕ್ಕ ನಂತರವಷ್ಟೇ ಈ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.

Join our WhatsApp Channel

Dailyhunt
Disclaimer: This content has not been generated, created or edited by Dailyhunt. Publisher: Bengaluru Wire