Sunday, 03 Jan, 5.04 pm ಚಂದ್ರವಳ್ಳಿ ನ್ಯೂಸ್

Posts
ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಐಆರ್ ಬಿ ಕಂಪನಿಯಿಂದ ಹಗಲು ದರೋಡೆ ಆರೋಪ, ಕಣ್ಮುಚ್ಚಿ ಕೂತ ಹೆದ್ದಾರಿ ಪ್ರಾಧಿಕಾರ...

ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಐಆರ್ ಬಿ ಕಂಪನಿಯಿಂದ ಹಗಲು ದರೋಡೆ ಆರೋಪ, ಕಣ್ಮುಚ್ಚಿ ಕೂತ ಹೆದ್ದಾರಿ ಪ್ರಾಧಿಕಾರ...

ಹಿರಿಯೂರು, ಶಿರಾ:

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಪ್ಲಾಜಾಗಳಲ್ಲಿ ಐಆರ್ ಬಿ ಕಂಪನಿ ವತಿಯಿಂದ ಹಗಲು ದರೋಡೆ ನಡೆಸುತ್ತಿದೆ ಎಂದು ವಾಹನಗಳ ಮಾಲೀಕರು, ಸಾರ್ವಜನಿಕರು ಆರೋಪಿಸಿದ್ದಾರೆ.

ಹಿರಿಯೂರು ತಾಲೂಕಿನ ಗುಯಿಲಾಳು ಮತ್ತು ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಐಆರ್ ಬಿ ಕಂಪನಿ ನಿರ್ವಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಈ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಮಾಡಿಸಿಲ್ಲ ಎಂದು ನೆಪವೊಡ್ಡಿ ಡಬಲ್ ಶುಲ್ಕ ವಸೂಲು ಮಾಡುವ ಮೂಲಕ ಹಗಲು ದರೋಡೆ ನಡೆಸಲಾಗುತ್ತಿದೆ. ಫಾಸ್ಟ್ಯಾಗ್ ಮಾಡಿಸಿಲ್ಲದ ವಾಹನಗಳಿಗೆ ಡಬಲ್ ಚಾರ್ಜ್ ವಸೂಲಿ ಮಾಡಲಾಗುತ್ತಿದೆ. ಇಂತಹ ಹಗಲು ದರೋಡೆ ತಡೆಯಸಲು ಯಾರಿಂದಲೂ ಸಾಧ್ಯ ಇಲ್ಲವೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಫಾಸ್ಟ್ಯಾಗ್ ಮೂಲಕ ಹೆದ್ದಾರಿ ಬಳಕೆ ಶುಲ್ಕ ಪಾವತಿ ಮಾಡಲು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಫೆಬ್ರವರಿ-15ರವರೆಗೆ ಗಡವು ವಿಸ್ತರಿಸಿದೆ. ಆದರೆ ಟೋಲ್ ಗಳಲ್ಲಿನ ಸಿಬ್ಬಂದಿಗಳು ಫಾಸ್ಟ್ಯಾಗ್ ಮಾಡಿಸಿಲ್ಲದ ವಾಹನಗಳ ಚಾಲಕರು ಮತ್ತು ಮಾಲೀಕರಿಂದ ಅಕ್ರಮವಾಗಿ ಡಬಲ್ ಶುಲ್ಕ ವಸೂಲಿ ಮಾಡುವ ಮೂಲಕ ಹಗಲು ದರೋಡೆಗೆ ನಿಂತಿದೆ ಎನ್ನುವ ಆರೋಪಗಳು ನಿತ್ಯ ಕೇಳಿ ಬರುತ್ತಿವೆ.

ಹೆದ್ದಾರಿ ಪಕ್ಕದ ಮತ್ತು 20 ಕಿಲೋ ಮೀಟರ್ ದೂರದ ಗ್ರಾಮಗಳಿಂದ ನಿತ್ಯ ಸಾವಿರಾರು ವಾಹನಗಳು ಹೆದ್ದಾರಿ ಸಂಪರ್ಕ ಪಡೆದು ಸಂಚರಿಸುತ್ತವೆ. ಸ್ಥಳೀಯರಿಂದ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಪಡೆದು ಸ್ಥಳೀಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಟೋಲ್ ಪ್ಲಾಜಾ ಸುತ್ತ ಮುತ್ತಲಿನ ಸ್ಥಳೀಯ ಊರುಗಳಿಗೆ ಶುಲ್ಕ ರಹಿತವಾಗಿ ಸಂಚರಿಸಲು ಯಾವುದೇ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ. ಈಗಾಗಲೇ ಸರ್ವೀಸ್ ರಸ್ತೆ ಇದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಕಡ್ಡಾಯವಾಗಿ ಎಲ್ಲ ವಾಹನಗಳು ಟೋಲ್ ಪ್ಲಾಜಾ ಬಳಸಿಕೊಂಡೇ ಒಳ ಮತ್ತು ಹೊರ ಹೋಗುವಂತ ವ್ಯವಸ್ಥೆ ರೂಪದಲ್ಲಿ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಟೋಲ್ ಪ್ಲಾಜಾಗಳಲ್ಲಿ ಪ್ರತಿ ನಿತ್ಯ ಸಾಕಷ್ಟು ಘರ್ಷಣೆಗಳು ಸಂಭವಿಸುತ್ತಿವೆ. ಟೋಲ್ ಪ್ಲಾಜಾಗಳಲ್ಲಿನ ಸಿಬ್ಬಂದಿಗಳು ಏಕಾಏಕಿ ಸಾರ್ವಜನಿಕರ ಮೇಲೆ ಎರಗಿ ಅವಾಚ್ಯಶಬ್ದಗಳಿಂದ ನಿಂಧಿಸಿ ಗಲಾಟೆ ಮಾಡುವಂತ ಪರಿಸ್ಥಿತಿ ಹಿರಿಯೂರು ಮತ್ತು ಶಿರಾ ಟೋಲ್ ಪ್ಲಾಜಾಗಳಲ್ಲಿದೆ. ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ರಕ್ಷಣೆ ನೀಡುವ ಬದಲಿಗೆ ಟೋಲ್ ಪ್ಲಾಜಾ ಕಂಪನಿಗೆ ಸಹಕಾರ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ದೆಹಲಿಯಿಂದ ಆಗ್ರಾ ನಗರಕ್ಕೆ ನಿರ್ಮಿಸಿರುವ ತಂತಿಬೇಲಿ ಸಹಿತ ಶುಲ್ಕ ಬಳಕೆ ಹೆದ್ದಾರಿಯಂತೆ ರಾಜ್ಯದಲ್ಲಿನ ಎಲ್ಲ ಹೆದ್ದಾರಿಗಳಲ್ಲೂ ರಸ್ತೆ ನಿರ್ಮಾಣ ಮಾಡಲಿ, ಯಾವುದೇ ಸ್ಥಳೀಯ ವ್ಯಕ್ತಿಗಳು ಶುಲ್ಕ ಸಹಿತ ಹೆದ್ದಾರಿಯಲ್ಲಿ ಸಂಚರಿಸುವುದಿಲ್ಲ. ರಾಜ್ಯದಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ನೂರಾರು ಸಾವು ನೋವುಗಳು ಸಂಭವಿಸಿವೆ. ಸರ್ವೀಸ್ ರಸ್ತೆ ಬಳಕೆಗೆ ಯೋಗ್ಯವಾಗಿಲ್ಲ. ಮುಳ್ಳು, ಜಾಲಿ ಗಿಡ ಮರಗಳು ಬೆಳೆದು ಸರ್ವೀಸ್ ರಸ್ತೆ ತುಂಬಾ ಹರಡಿಕೊಂಡಿವೆ. ಇನ್ನೂ ಮಳೆಗಾಲದಲ್ಲಿ ಅಂಡರ್ ಪಾಸ್ ನಲ್ಲಿ ಸಾರ್ವಜನಿಕರು ಸಂಚರಿಸಬೇಕಾದರೆ ಅವರನ್ನು ದೇವರೇ ಕಾಪಾಡಬೇಕು. ಇಂತಹ ಹಲವು ಲೋಪಗಳಿಂದ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಿಸಿದ್ದು ಒಂದು ಕಡೆಯಾದರೆ ಅಕ್ರಮವಾಗಿ ಡಬಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇಂತಹ ಐಆರ್ ಬಿ ಕಂಪನಿ ಮತ್ತು ಆ ಕಂಪನಿಯಲ್ಲಿ ಕೆಲಸ ಮಾಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಹೆದ್ದಾರಿ ಸಮೀಪದ ವಿವಿಧ ಗ್ರಾಮಗಳಿಗೆ ಐದಾರು ಕಿಲೋ ಮೀಟರ್ ಸಂಚರಿಸಿದರೂ ಟೋಲ್ ಶುಲ್ಕ ಕಟ್ಟುವಂತೆ ಸಿಬ್ಬಂದಿಗಳು ತಾಕೀತು ಮಾಡುತ್ತೀರುತ್ತಾರೆ. ಹೆದ್ದಾರಿ ರಸ್ತೆ ಉಪಯೋಗಿಸದಿದ್ದರೂ ಶುಲ್ಕ ಕಟ್ಟಬೇಕಾಗಿರುವುದು ದುರಂತ ಎನಿಸಿದೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾನೂನು ಪ್ರಕಾರ ಯಾವುದೇ ಸ್ಥಳೀಯ ಮತ್ತು ಸುತ್ತ ಮುತ್ತಲ ವೈಯಕ್ತಿಕ ವಾಹನಗಳಿಗೆ ಶುಲ್ಕ ಸ್ಪೀಕರಿಸುವಂತೆ ಇರುವುದಿಲ್ಲ. ಕೇವಲ ವಾಣಿಜ್ಯೋದ್ಯಮ, ವ್ಯವಹಾರಿಕ ವಾಹನಗಳ ಮೇಲೆ ಟೋಲ್ ಶುಲ್ಕ ಮಾತ್ರ ಪಡೆಯಬೇಕು. ಜಮೀನುಗಳಿಗೆ ನಿತ್ಯ ಹೋಗುವ ಮಾಲೀಕರಿಂದ ವಾಹನ ಶುಲ್ಕ ವಸೂಲಿ ಮಾಡುವುದನ್ನು ತಡೆಗಟ್ಟಬೇಕು. ಗ್ರಾಮಗಳಿಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಕಟ್ಟಬೇಕಾದರೆ ಹೆದ್ದಾರಿ ಪ್ರಾಧಿಕಾರ ನಿಯಮದಂತೆ ಎಷ್ಟು ಕಿ.ಮೀ.ಗೆ ಎಷ್ಟು ಹಣ ಕಟ್ಟಬೇಕು ಎಂಬುದು ಬಹಿರಂಗಗೊಳಿಸಬೇಕು ಎಂದು ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ. ವರದಿ-ಹರಿಯಬ್ಬೆ ಹೆಂಜಾರಪ್ಪ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: chandravalli nyus
Top