Thursday, 30 Jul, 9.48 am ಚಂದ್ರವಳ್ಳಿ ನ್ಯೂಸ್

Posts
ರಫೇಲ್ ಎಂಬ ಆಧುನಿಕ ಮತ್ತು ಬಲಿಷ್ಠ ಯುದ್ಧ ವಿಮಾನಗಳ ಸಂಭ್ರಮದಲ್ಲಿ ಹಸಿವು ಮರೆತ ಆಧುನಿಕ ನಾಗರಿಕರು...

ಬೆಂಗಳೂರು:

ರಫೇಲ್ ಎಂಬ ಆಧುನಿಕ ಮತ್ತು ಬಲಿಷ್ಠ ಯುದ್ಧ ವಿಮಾನಗಳು,
ರೆಕ್ಕೆ ಸುಟ್ಟುಕೊಂಡ ಪಾರಿವಾಳಗಳು,
ಬುದ್ಧಿಮಾಂದ್ಯ ಟಿವಿ ಸುದ್ದಿ ನಿರೂಪಕರು,
ಮುದ್ದು ಬೊಂಬೆಯಂತೆ ರಫೇಲ್ ವಿಮಾನ ನೋಡಿ ಮಕ್ಕಳಂತೆ ಕುಣಿದಾಡಿದ ಜನರು,
ಓಡಿಹೋದ ಕೊರೋನಾ ಎಂಬ ವೈರಸ್,
ಹಸಿವು ಮರೆತ ಆಧುನಿಕ ನಾಗರಿಕರು,
ಮನಸ್ಸಿನ ಮುಖವಾಡಗಳು ಬೆತ್ತಲೆಯಾಗುತ್ತಿರುವ ಮುಸ್ಸಂಜೆಯಲ್ಲಿ.....

ಯಾಕೋ ಏನೋ ಹೀಗೆ ಹುಚ್ಚುಚ್ಚಾಗಿ ಕೆಲವು ಕಲ್ಪನೆಗಳು ಮನದಾಳದಲ್ಲಿ ಮೂಡುತ್ತಿದೆ.

ಕೇವಲ 5 ( ಒಟ್ಟು 36 ) ವಿದೇಶದಿಂದ ಆಮದು ಮಾಡಿಕೊಂಡ ವಿಮಾನಗಳು ಭಾರತದ ಸೈನಿಕ ಶಕ್ತಿಯನ್ನು ಜಾಗತಿಕವಾಗಿ ಬಲಿಷ್ಠ ಗೊಳಿಸಿದೆ ಎಂದು ಸುದ್ದಿ ಮಾಧ್ಯಮಗಳು ಜನರನ್ನು ನಂಬಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಯುದ್ಧವೆಂದರೆ ಬಲಿಷ್ಠ ವಿಮಾನಗಳು ಮಾತ್ರ ಎಂದು ಯುದ್ದ ಭೂಮಿಯನ್ನು ಒಮ್ಮೆಯೂ ನೋಡದ ಅಮಾಯಕ ಜನರಿಗೆ, ಅವರು ಕೊರೋನಾ ವೈರಸ್ ಎಂಬ ಸೂಕ್ಷ್ಮ ಜೀವಿಗೆ ಹೆದರಿ ಅಡಗಿ ಕುಳಿತಿರುವಾಗ ಮನವರಿಕೆ ಮಾಡಿಕೊಡುತ್ತಿವೆ.

ಇಲ್ಲಿಯವರೆಗೂ ಸೈನ್ಯ ದುರ್ಬಲ ಸ್ಥಿತಿಯಲ್ಲಿ ಇತ್ತೇ ? ಈಗ ಕೇವಲ ಕೆಲವು ವಿಮಾನಗಳು ಸೇರಿದ ಮಾತ್ರಕ್ಕೆ ವಿರೋಧಿಗಳನ್ನು ಚಿಂದಿ ಉಡಾಯಿಸಬಹುದೇ ?
ಶತ್ರುಗಳು ಮಾತ್ರ ಇನ್ನೂ ಇದ್ದ ಜಾಗದಲ್ಲೇ ಇರುತ್ತಾರೆಯೇ ?
ಸಾಮಾನ್ಯ ಜನರು ಮತ್ತು ಮಾಧ್ಯಮಗಳಿಗೆ ಅಷ್ಟು ಸುಲಭವಾಗಿ ಯುದ್ಧದ ಶಕ್ತಿ ಮತ್ತು ರಕ್ಷಣಾತ್ಮಕ ತಂತ್ರಗಳು ಅರ್ಥವಾಗುತ್ತದೆಯೇ ?
ಸೈನ್ಯಕ್ಕೆ ಆಧುನಿಕ ಯುದ್ಧ ವಿಮಾನಗಳ ಸೇರ್ಪಡೆ ಎಂಬ ಸುದ್ದಿ ಇಷ್ಟೊಂದು ಪ್ರಚಾರ ಪಡೆಯುವುದು ಜನರ ಕಿವಿಗೆ ಹೂ ಇಡುವುದು ಎಂದು ಅರ್ಥಮಾಡಿಕೊಳ್ಳಲಾರದಷ್ಟು ಜನರು ಬೆಪ್ಪರಾದರೆ ? ಮಾಧ್ಯಮಗಳು ವಿವೇಚನೆ ಕಳೆದುಕೊಂಡವೇ ?

ಒಂದು ಸಣ್ಣ ಆಲೋಚನೆ....

ವಿಮಾನಗಳ ಹಾರಾಟ ಮತ್ತು ಶಕ್ತಿ ಮೊಬೈಲ್ ನಂತೆ ಬಹುತೇಕ ಎಲೆಕ್ಟ್ರಾನಿಕ್ ತಂತ್ರಜ್ಞಾನವನ್ನೇ ಅವಲಂಬಿಸಿದೆ. ಈ ಎಲೆಕ್ಟ್ರಾನಿಕ್ ತಂತ್ರಜ್ಞಾನ ಪ್ರತಿ ವರ್ಷವೂ ಅತ್ಯಂತ ತ್ವರಿತವಾಗಿ ಬೆಳವಣಿಗೆ ಹೊಂದುತ್ತಿದೆ. 2G ಯಿಂದ 5G ಗೆ ಪರಿವರ್ತನೆ ಹೊಂದಲು ಕೆಲವೇ ವರ್ಷಗಳು ಸಾಕಾದವು. ಹಾಗೆಯೇ ವಿಮಾನಗಳ ವೇಗ, ಚಾಕಚಕ್ಯತೆ ಮುಂತಾದ ಎಲ್ಲವೂ ಕೆಲವೇ ವರ್ಷಗಳಲ್ಲಿ ಮತ್ತೆ ಇನ್ನಷ್ಟು Upgrade ಆಗುತ್ತದೆ. ಮತ್ತೆ ಇನ್ನೊಂದು ತಂತ್ರಜ್ಞಾನ ಆ ಜಾಗದಲ್ಲಿ ಬರುತ್ತದೆ. ಕೆಲವೇ ವರ್ಷಗಳಲ್ಲಿ ವಿಮಾನಗಳು ಮರೆಯಾಗಿ ಕಣ್ಣಿಗೆ ಕಾಣದ ರಾಕೆಟ್ ಗಳು ಬರಬಹುದು ಅಥವಾ ಯುದ್ಧ ತಂತ್ರವೇ ಬದಲಾಗಿ ಇನ್ನೇನೋ ರಾಸಾಯನಿಕ ಅಸ್ತ್ರಗಳು ಬರಬಹುದು. ಈ ವಿಮಾನಗಳು ಕೇವಲ ಸಾಗಾಣಿಕೆಗೆ ಮಾತ್ರ ಉಪಯೋಗಕ್ಕೆ ಬರಬಹುದು....

ಒಟ್ಟಿನಲ್ಲಿ ಇದೊಂದು ಸಹಜ ಪ್ರಕ್ರಿಯೆ. ಯಾವುದೂ ಶಾಶ್ವತವಲ್ಲ. ಬಲ ಅಥವಾ ಶಕ್ತಿ ಎಂಬುದು ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಆ ಶಕ್ತಿ ಯಾವುದು ಎಂದು ಗುರುತಿಸಿ ಅದನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವವರು ಸದಾ ಬಲಶಾಲಿಯಾಗಿಯೇ ಇರುತ್ತಾರೆ. ಆ ರೀತಿ ಅನೇಕ ದೇಶಗಳು ಮಾಡುತ್ತಿವೆ. ಅದರಲ್ಲಿ ಭಾರತವೂ ಒಂದು. ಅದಕ್ಕಾಗಿ ಹೆಮ್ಮೆ ಇದೆ.

ಆದರೆ ಅದೇ ಎಲ್ಲವೂ ಎಂಬಂತೆ ಬಿಂಬಿಸುವ ಮತಿಹೀನ ಮಾಧ್ಯಮಗಳ ಪ್ರಚಾರ ಮಾತ್ರ ತುಂಬಾ ವಿಷಾದನೀಯ ಮತ್ತು ಖಂಡನಾರ್ಹ. ಇತ್ತೀಚೆಗೆ ಆಂದ್ರಪ್ರದೇಶದ ಒಂದು ಹಳ್ಳಿಯಲ್ಲಿ ರೈತರೊಬ್ಬರು ತನ್ನ ಸ್ವಲ್ಪವೇ ಕೃಷಿ ಭೂಮಿಯನ್ನು ಉಳಲು ಎತ್ತುಗಳನ್ನು ಕೊಳ್ಳಲು ಹಣ ಇಲ್ಲದೇ ತನ್ನದೇ ಇಬ್ಬರು ಹೆಣ್ಣು ಮಕ್ಕಳನ್ನು ಎತ್ತುಗಳಂತೆ ಉಪಯೋಗಿಸಿದ ದೃಶ್ಯಗಳು ಪ್ರಸಾರವಾದವು.

ಕನಿಷ್ಠ ಆಸ್ಪತ್ರೆ ಒಳಗೆ ಪ್ರವೇಶಿಸಲೂ‌ ಜೀವನ್ಮರಣದಿಂದ ಉಸಿರು ಕಟ್ಟುತ್ತಿರುವ ವ್ಯಕ್ತಿಗೆ ಸಾಧ್ಯವಾಗದ ದೃಶ್ಯಗಳು ಅನೇಕಾನೇಕ ನಮ್ಮ ಸುತ್ತಲೇ ಘಟಿಸುತ್ತಿವೆ. ಸಾವುಗಳು ರಸ್ತೆಗಳಲ್ಲಿ ಎಂಬುದು ಸಹಜ ಸುದ್ದಿಯಾಗುವ ಅತ್ಯಂತ ಹೃದಯವಿದ್ರಾವಕ ಸನ್ನಿವೇಶದಲ್ಲಿ ನಾವಿದ್ದೇವೆ. ಅದಕ್ಕಿಂತ ರಫೇಲ್ ಮುಖ್ಯವಾಗುವುದು ಏಕೆ ಎಂದು ಯೋಚಿಸದಷ್ಟು ಜನ ಮತ್ತು ಮಾಧ್ಯಮಗಳು ಮರುಳಾದರೆ ವ್ಯವಸ್ಥೆಯ ಗತಿ ಏನು.

ರಕ್ಷಣೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಮೇಲ್ವಿಚಾರಣೆಗೆ ಒಂದು ಬೃಹತ್ ಮತ್ತು ಪ್ರಭಾವಶಾಲಿ ವ್ಯವಸ್ಥೆ ಇದೆ. ಆದರೆ ‌ಬಡವರು ದೀರ್ಘ ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿಭಾಯಿಸಲು ಯಾವುದೇ ವ್ಯವಸ್ಥೆ ಇಲ್ಲ. ಎಲ್ಲವೂ ಅವ್ಯವಸ್ಥೆ. ಇದನ್ನು ಮರೆಯುವುದು, ನೋಡಿಯೂ ನೋಡದಂತಿರುವುದು, ಆಕಾಶದಲ್ಲಿ ವಿಮಾನ ನೋಡಿ ಸಂಭ್ರಮಿಸುವುದು ಹೇಗೆ ಸಾಧ್ಯ.....

ಮೇಲೆ ಯುದ್ಧ ವಿಮಾನಗಳು ಹಾರಾಡುವುದನ್ನು ನೋಡಲು ಸಾಕಷ್ಟು ಜನರಿದ್ದಾರೆ. ನೆಲದ ಮೇಲಿನ ನತದೃಷ್ಟ ಅಸಹಾಯಕ ಮನುಷ್ಯ ಪ್ರಾಣಿಗಳ ಯೋಗಕ್ಷೇಮ ವಿಚಾರಿಸಲು ತುಂಬಾ ಕಡಿಮೆ ಜನರಿದ್ದಾರೆ ಇದ್ದಾರೆ. ಬಡವರಿಗೆ ಸಹಾಯ ಮಾಡಿದರೆ ಯಾವುದೇ ಲಾಭ, ಅಧಿಕಾರ, ಜನಪ್ರಿಯತೆ ಸಿಗುವುದಿಲ್ಲ. ಆದರೂ ಕೆಲವರಾದರೂ ರಫೇಲ್ ವಿಚಾರ ರಕ್ಷಣಾ ಇಲಾಖೆಗೆ ಬಿಟ್ಟು ಅನಾರೋಗ್ಯದಿಂದ ಪ್ರಾಣ ಬಿಡುತ್ತಿರುವ, ಹಸಿವಿನಿಂದ ಕಂಗಾಲಾಗಿರುವ ಜನರ ಬಗ್ಗೆ ನಮ್ಮ ಕೈಲಾದಷ್ಟು ಗಮನ ಸೆಳೆಯೋಣ.

ಹೋಟೆಲ್ ಕಾರ್ಮಿಕರೊಬ್ಬರು ರಫೇಲ್ ಶಕ್ತಿಯ ಬಗ್ಗೆ ಟಿವಿಯಲ್ಲಿ ವರ್ಣಿಸುತ್ತಿದ್ದಾಗ ಕೋಪದಿಂದ ಕಿರುಚಿದರು
" ಊಟಕ್ಕಿಲ್ಲದ ಉಪ್ಪಿನಕಾಯಿ..... "

ಏಕೆಂದರೆ, ಆತ ಎರಡು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ. ಮಗುವಿಗೆ ಆನ್ ಲೈನ್ ಪಾಠ ಕೇಳಲು ಮೊಬೈಲ್ ಸಹ ಹೊಂದಿಸಲಾಗುತ್ತಿಲ್ಲ.

ವಿಮಾನ ನೆಲದಿಂದ ಆಕಾಶದಲ್ಲಿ ಭವ್ಯವಾಗಿ ಹಾರಾಡುತ್ತಿದೆ, ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುತ್ತಿದ್ದ ಪಾರಿವಾಳ ರೆಕ್ಕೆ ಮುರಿದು ನೆಲಕ್ಕೆ ಬೀಳುತ್ತಿದೆ,
ನೆಲದಲ್ಲಿ ವಾಸಿಸುತ್ತಿದ್ದ ಮನುಷ್ಯ ಭೂಮಿಯ ಒಳಗೆ ಸಮಾಧಿಯಾಗುತ್ತಿದ್ದಾನೆ........

Yes, ಬಲಿಷ್ಠರು ಮಾತ್ರ ಉಳಿಯುತ್ತಾರೆ. ಅದೇ ವಾಸ್ತವ.
ನಾವು ಬಲಿಷ್ಠರಾಗೋಣ.......

ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ. ಇದ್ದಕ್ಕಿದ್ದಂತೆ ಕೆಲವರಿಗೆ ನಾಲ್ಕು ತಿಂಗಳ ಹಿಂದಿನ ಜೀವ ಮುಖ್ಯ ಎಂದು ಹೇಳಿದ ಇತಿಹಾಸ ಮರೆತು ಹೋಗಿದೆ. ಜೀವಕ್ಕಿಂತ ಜೀವನವೇ ಮುಖ್ಯ ಎಂದು ಮಾತು ಬದಲಾಯಿಸಿದ್ದಾರೆ. ಏಕೆಂದರೆ ಅವರ ಜೀವ ಉಳಿದಿದೆ. ಭಾರತದ ಬಡವರ ಜೀವ ಆಂಬುಲೆನ್ಸ್ ಇಲ್ಲದೇ ನರಳುತ್ತಿದೆ. ಇನ್ನು ಜೀವನದ ಮಾತೆಲ್ಲಿ.
ಆತ್ಮೀಯರೆ ದಯವಿಟ್ಟು ದಯವಿಟ್ಟು ಮುಖವಾಡಗಳು ಕಳಚಿ ಬೀಳುತ್ತಿರುವ ಈ ಸಂದರ್ಭದಲ್ಲಿ ಕನಿಷ್ಠ ಅದನ್ನು ಗ್ರಹಿಸುವ ಬುದ್ದಿವಂತಿಕೆ ಮತ್ತು ಹೃದಯವಂತಿಕೆ ನಿಮ್ಮದಾಗಲಿ. ಇಲ್ಲದಿದ್ದರೆ ಭವಿಷ್ಯ ಕಷ್ಟ ಕಷ್ಟ.....

ರಫೇಲ್ ನೋಡಿ ಮೈ ಮರೆಯದೆ,
ನಿಮ್ಮ ಮೈ ನೋಡಿ ಜಾಗೃತರಾಗಿ.....

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಲೇಖನ-ವಿವೇಕಾನಂದ. ಹೆಚ್.ಕೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: chandravalli nyus
Top