ಪ್ರಮುಖ ಸುದ್ದಿಗಳು
ಫ್ಲೆಮಿಂಗೋ ಪ್ರಶಸ್ತಿ : ಅತ್ಯುತ್ತಮ ನಟ ಅನಿರುದ್ದ, ಅತ್ಯುತ್ತಮ ನಟಿ ಭಾವನಾ

ಯುವನಟ ಧವನ್ ಸೋಹಾ ಅವರ ಸಾರಥ್ಯದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಆರಂಭವಾದ ಫ್ಲೆಮಿಂಗೋ ಚಲನಚಿತ್ರ ತರಬೇತಿ ಸಂಸ್ಥೆ ಈಗ ಅಗಾಧವಾಗಿ ಬೆಳಿದುನಿಂತಿದೆ. ಈ ಸಂಸ್ಥೆಯ ಮೂಲಕ ಕಲಿತ ನೂರಾರು ವಿದ್ಯಾರ್ಥಿಗಳು ಚಿತ್ರರಂಗ, ಕಿರುತೆರೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮಲ್ಲಿ ತರಬೇತಿ ಪಡೆದವರಿಗೆ ಕಿರುತೆರೆ, ಹಿರಿತೆರೆಯಲ್ಲಿ ಅವಕಾಶಗಳನ್ನು ಕಲ್ಪಿಸುತ್ತಾ ಬಂದಿರುವ ಈ ಸಂಸ್ಥೆ ಸ್ಯಾಂಡಲ್‍ವುಡ್ ಸ್ಟಾರ್‍ನೈಟ್ಸ, ಮಿಸ್ ಯುವರಾಣಿ ಸ್ಪರ್ದೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ಅದರಂತೆ ಈ ಸಲವೂ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಗುರ್ತಿಸಿ ಅತ್ಯುತ್ತಮ ನಟ, ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಿದೆ. ಅದರಂತೆ ಈ ಸಲದ ಅತ್ಯುತ್ತಮ ನಟನಾಗಿ ಅನಿರುದ್ದ ಹಾಗೂ ಅತ್ಯುತ್ತಮ ನಟಿಯಾಗಿ ಭಾವನಾ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕಳೆದವಾರ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟ ಅನಿರುದ್ದ ದವನ್ ನನಗೆ ಬಹಳ ವರ್ಷಗಳ ಸ್ನೇಹಿತ, ಆತ ಇನ್‍ಸ್ಟಿಟ್ಯೂಟ್ ಮಾಡಿರುವುದು, ಎಂಟು ವರ್ಷಗಳಿಂದ ಉತ್ತಮವಾಗಿ ನಡೆಸಿಕೊಂಡು ಬರುತ್ತಿರುವುದು ನೋಡಿ ನನಗೆ ಬಹಳ ಖುಷಿಯಾಯಿತು, ಕಲಿಯುತ್ತಿರುವ ವಿದ್ಯಾರ್ಥಿಗಳಿಗೂ ಅಷ್ಟೇ, ನಾವು ಇಲ್ಲಿ ಎಲ್ಲಾ ಕಲಿತುಬಿಡ್ತೀವಿ ಎಂದುಕೊಳ್ಳಬೇಡಿ, ಇದು ಮೊದಲನೇ ಹೆಜ್ಜೆ, ಇಲ್ಲಿಂದ ಮುಂದೆ ಒಂದು ದಾರಿ ಸಿಗುತ್ತದೆ, ಇಲ್ಲಿಂದ ಹೊರಹೋದ ಮೇಲೆ ಕಲಿಯುವುದು ಸಾಕಷ್ಟಿರುತ್ತದೆ, ಮುಖ್ಯವಾಗಿ ತುಂಬಾ ತಾಳ್ಮೆ ಇರಬೇಕು, ತಾಳ್ಮೆ ಇದ್ರೆ ಗೆಲ್ಲಬಹುದು ಎನ್ನುವುದಕ್ಕೆ ನಾನೇ ಉದಾಹರಣೆ, ನೀವೆಲ್ಲ ಮುಂದೆ ಬೆಳೆದಮೇಲೆ ಸಮಾಜಕ್ಕೆ ಏನಾದರೂ ಒಳ್ಳೇ ಕೊಡುಗೆ ಕೊಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಂತರ ನಟಿ ಭಾವನಾ ಮಾತನಾಡುತ್ತ ಭವ್ಯ ಮೇಡಂ ಜೊತೆ ಚಂದ್ರಮುಖಿ ಪ್ರಾಣಸಖಿ ಚಿತ್ರದಲ್ಲಿ ಆಕ್ಟ್ ಮಾಡಿದ್ದೆ, ಇವರು ಲೆಕ್ಚರರ್ ಅಂತ ಹೇಳಿಕೊಳ್ಳಲು ಆಗಲ್ಲ, ಅವರು ಯಾರಮೇಲೂ ಸಿಟ್ಟು ಮಾಡಿಕೊಂಡವರಲ್ಲ, ದೊಡ್ಡ ಹಿಟ್ ಚಿತ್ರಗಳನ್ನು ಕೊಟ್ಟವರು, ಅವರ ಪ್ರೀತಿಯ ಮಾತುಗಳೇ ನಿಮಗೆ ಸಹಕಾರಿಯಾಗಬಹುದು, ಅವರಿಂದ ಕಲಿಯುವುದು ಸಾಕಷ್ಟಿದೆ. ಹಣದ ಹಿಂದೆ ಯಾರೂ ಹೋಗಬೇಡಿ, ಪ್ರತಿಭೆ ಇದ್ದರೆ ಅದು ತಾನಾಗೇ ಹುಡುಕಿಕೊಂಡು ಬರುತ್ತದೆ ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ನಟಿ ಭವ್ಯ ಮಾತನಾಡಿ ನಾನು ಕಳೆದ ವರ್ಷವಷ್ಟೇ ಈ ಸಂಸ್ಥೆಗೆ ಸೇರಿಕೊಂಡೆ. ಅನಿರುದ್ದ ಅವರ ಜೊತೆಜೊತೆಯಲಿ ಧಾರಾವಾಹಿಯನ್ನು ನಾನು ನೋಡುತ್ತಿದ್ದೇನೆ, ಅವರು ವಿಷ್ಣು ಸರ್ ಅವರ ಅಳಿಯ ಕೂಡ. ವಿಷ್ಣು ಅವರ ಜೊತೆ ನಾನು ಬಹಳಷ್ಟು ಚಿತ್ರಗಳಲ್ಲಿ ಆಕ್ಟ್ ಮಾಡಿದ್ದೇನೆ.
ಇನ್ನು ಭಾವನಾ ಅವರಿಗೆ ಶಾಂತಿ ಚಿತ್ರದಲ್ಲಿ ಬೆಸ್ಟ್ ಆಕ್ಟರ್ ಪ್ರಶಸ್ತಿ ಬಂದಿತ್ತು. ಆಗ ನಾನೂ ಕಮಿಟಿಯಲ್ಲಿದ್ದೆ ಎಂದರು. ಇದೇ ಸಂದರ್ಭದಲ್ಲಿ 2021ರ ಪ್ಲಮಿಂಗೋ ಕ್ಯಾಲೆಂಡರನ್ನು ಸಹ ಬಿಡುಗಡೆ ಮಾಡಲಾಯಿತು.